ಕಾಸರಗೋಡು : ಯಕ್ಷಗಾನ ಕಲಾವಿದ ಕೀರಿಕ್ಕಾಡು ಮಾಸ್ತರ್ ಇವರ ಶಿಷ್ಯರೂ ಆಗಿದ್ದ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 18ನೇ ವರ್ಷದ ಸಂಸ್ಮರಣೆಯು ದಿನಾಂಕ 10 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.
ಇದೇ ಸಂದರ್ಭ ದೇಲಂಪಾಡಿ ಮಹಾಲಿಂಗ ಪಾಟಾಳಿ ಮತ್ತು ಸೀತಮ್ಮನವರ ಸ್ಮರಣಾರ್ಥವಾಗಿ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ – ಸೀತಮ್ಮ ಸ್ಮೃತಿ ಪುರಸ್ಕಾರವನ್ನು ನಾಡಿನ ಹಿರಿಯ ವೈದ್ಯರೂ, ಕಲಾವಿದರೂ, ಸಾಹಿತಿಗಳೂ ಆಗಿರುವ ಡಾ. ರಮಾನಂದ ಬನಾರಿಯವರಿಗೆ ಪ್ರದಾನ ಮಾಡಲಾಗುವುದು. ಶ್ರೀ ಗೋಪಾಲಕೃಷ್ಣ ದೇವರ ಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ, ನಿವೃತ್ತ ಮುಖ್ಯೋಪಾಧ್ಯಾಯ ದೇಲಂಪಾಡಿ ರಾಮಣ್ಣ ಮಾಸ್ತರ್ ವಹಿಸುವರು. ಲೇಖಕರು, ಕಲಾವಿದರು ಮತ್ತು ಉಪನ್ಯಾಸಕರಾಗಿರುವ ನಾರಾಯಣ ತೋರಣಗಂಡಿ ಸಂಸ್ಮರಣಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮದ ನಂತರ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಸೀತಾಪಹಾರ – ಜಟಾಯು ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆಯು ಜರಗಲಿದೆ.