ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಕಲಾವಿದರಿಂದ ದಿನಾಂಕ 20-01-2024ರಂದು ಕೋಟೇಶ್ವರ ಬೀಜಾಡಿ ಸಮೀಪದ ಯುವ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಲ್ಲಿ ಪಂಚಕರ್ಮ ಚಿಕಿತ್ಸೆಗಾಗಿ ಬಂದ ಅಮೇರಿಕಾದ ಪ್ರಜೆಗಳಿಗಾಗಿ ಕಲಾವಿದರೂ, ಉಪನ್ಯಾಸಕರೂ ಆದ ಸುಜಯೀಂದ್ರ ಹಂದೆ ಎಚ್. ನಿರ್ದೇಶನದಲ್ಲಿ ಇಂಗ್ಲಿಷ್ ಭಾಷಾ ಸಂವಹನದೊಂದಿಗೆ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನದ ಬಡಗುತಿಟ್ಟಿನ ಪ್ರಾತ್ಯಕ್ಷಿಕೆ ನಡೆಯಿತು.
ತೆರೆಯ ಮರೆಯ ಚೌಕಿಯಲ್ಲಿ ನಡೆಯುವ ಸಾಂಪ್ರಾಯಿಕ ಮುಖವರ್ಣಿಕೆ, ವೇಷಕಟ್ಟುವ ಕ್ರಮ, ಕೇದಗೆಮುಂದಲೆ ಮತ್ತು ಕಿರೀಟ ವೇಷಗಳ ಸಿದ್ಧತೆಯನ್ನು ರಂಗದಲ್ಲೇ ತೋರಿಸುವುದರೊಂದಿಗೆ ವಿವಿಧ ತಾಳ, ಹಸ್ತಾಭಿನಯ ಮುದ್ರೆ, ರಸ ಭಾವಗಳ ಕುಣಿತ, ಯುದ್ಧ ಕುಣಿತಗಳ ಆಂಗಿಕಾಭಿನಯ, ಆಹಾರ್ಯಾಭಿನಯ, ವಾಚಿಕಾಭಿನಯ, ಸಾತ್ವಿಕಾಭಿನಯಗಳನ್ನು ಪ್ರದರ್ಶಿಸಲಾಯಿತು.
ಕುಮಾರಿ ಕಾವ್ಯ ಹಂದೆ ಎಚ್. ನಿರೂಪಣೆಯಲ್ಲಿ ನವೀನ್ ಕೋಟ, ಮನೋಜ್ ಆಚಾರ್, ಆದಿತ್ಯ ಹೊಳ್ಳ, ಭಾಗವತ ದೇವರಾಜ ದಾಸ್, ಮದ್ದಳೆವಾದಕರಾದ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾದ ಸುದೀಪ ಉರಾಳ ಮುಮ್ಮೇಳ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದರು.