ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ವತಿಯಿಂದ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಂಗಹಬ್ಬದ 2ನೇ ದಿನದ ಕಾರ್ಯಕ್ರಮವು ದಿನಾಂಕ 26-02-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರು ಮಾತನಾಡಿ “ಸಮಾಜದ ತೊಡಕುಗಳನ್ನು ತೊಡೆದು ಹಾಕುವ ಕೆಲಸವನ್ನು ರಂಗಭೂಮಿ ಮಾಡುತ್ತದೆ. ಯಾವುದೇ ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಾಗ ಬದುಕು ಸಂಭ್ರಮದಿಂದ ಕೂಡಿರುತ್ತದೆ. ವೃತ್ತಿ, ಪ್ರವೃತ್ತಿ ಬೇರೆ ಬೇರೆಯಾಗಿರುತ್ತದೆ. ವೃತ್ತಿಗೆ ಹೆಚ್ಚು ಗಮನಕೊಡಬೇಕಾಗುತ್ತದೆ. ಆಗ ಪ್ರವೃತ್ತಿ ಹಿಂದಕ್ಕೆ ಸರಿಯುತ್ತದೆ. ಮಕ್ಕಳಲ್ಲಿ ಉತ್ತಮ ಅಭಿರುಚಿ ಬೆಳೆಸಲು ಪ್ರವೃತ್ತಿ ಅಗತ್ಯ. ಕಾಲ ಬದಲಾಗಿದೆ, ಮಕ್ಕಳು ಬದಲಾಗಿದ್ದಾರೆ. ಹಿಂದಿನಂತೆ ಇಲ್ಲ ಎಂಬ ಮಾತುಗಳಿವೆ. ಆದರೆ, ಬದಲಾಗಿದ್ದು, ಕಾಲ ಅಥವಾ ಮಕ್ಕಳು ಅಲ್ಲ. ಬದಲಾಗಿದ್ದು, ಹೆತ್ತವರ ಮನಸ್ಸು. ಇರುವ ಒಂದು ಅಥವಾ ಎರಡು ಮಕ್ಕಳೇ ಸಂಗೀತ, ಕರಾಟ, ಕ್ರೀಡೆ, ಕಲಿಕೆ ಎಲ್ಲದರಲ್ಲಿಯೂ ಮೊದಲ ಸ್ಥಾನದಲ್ಲಿರಬೇಕು ಎಂದು ಹೆತ್ತವರು ಬಯಸುತ್ತಿರುವುದೇ ಮಕ್ಕಳು ಹಿಂದಿನ ಕಾಲದಲ್ಲಿ ಇರುವಂತೆ ಈಗ ಇರಲು ಸಾಧ್ಯವಾಗದಂತೆ ಮಾಡಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರು ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ತಮ್ಮ ಮಕ್ಕಳನ್ನು ಶಿಕ್ಷಕರನ್ನಾಗಿ ಮಾಡುತ್ತಿಲ್ಲ. ಡೆಡ್ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಕೆಲಸ ಬಯಸುತ್ತಿದ್ದಾರೆ” ಎಂದು ಹೇಳಿದರು.
ರಂಗ ಕಲಾವಿದ ಸುಜಿತ್ ಎಸ್. ಶೆಟ್ಟಿ ಕಾಪು ಅವರಿಗೆ ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಉಡುಪಿ ನಗರಸಭೆ ಪರಿಸರ ಎಂಜಿನಿಯರ್ ಸ್ನೇಹಾ ಕೆ.ಎಸ್., ಉದ್ಯಮಿಗಳಾದ ಆನಂದ ಪಿ. ಸುವರ್ಣ, ವಿಠಲ್ ಮೈಂದನ್, ಪ್ರಭಾಕರ್ ಕುಂದರ್, ನಾಗರಾಜ್ ಸುವರ್ಣ, ಸುಮನಸಾ ಕೊಡವೂರು ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್ ಕಲ್ಮಾಡಿ, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಎಂ.ಎಸ್. ಭಟ್ ಸ್ವಾಗತಿಸಿ, ಸದಸ್ಯ ಪ್ರಥಮ್ ವಂದಿಸಿ. ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಸವದತ್ತಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ ‘ದೇವಸೂರ’ ನಾಟಕ ಪ್ರದರ್ಶನಗೊಂಡಿತು.





