ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಇದರ ಸಹಕಾರದೊಂದಿಗೆ ಹವ್ಯಕ ಸಭಾ ಮಂಗಳೂರು (ರಿ) ಇದರ ಆಶ್ರಯದಲ್ಲಿ ಶ್ರೀ ಭಾರತೀ ಕಾಲೇಜು ಮಂಗಳೂರು ಹಾಗೂ ಲಯನ್ ಕ್ಲಬ್ ಮಂಗಳೂರು ಇದರ ಸಹಭಾಗಿತ್ವದೊಂದಿಗೆ ಧನ್ವಂತರಿ ಜಯಂತಿ ದಿನಾಚರಣೆ ಮತ್ತು ಲೇಖಕ ಡಾ. ಮುರಲೀ ಮೋಹನ್ ಚೂಂತಾರು ಅವರ 14ನೇ ಕೃತಿ ‘ಧನ್ವಂತರಿ ಭಾಗ-2’ ವೈದ್ಯಕೀಯ ಲೇಖನಗಳ ಪುಸ್ತಕ ಇದರ ಬಿಡುಗಡೆ ಸಮಾರಂಭವು ದಿನಾಂಕ 10-11-2023ರ ಶುಕ್ರವಾರದಂದು ನಂತೂರಿನ ಶ್ರೀ ಭಾರತೀ ಕಾಲೇಜು ಇದರ ಶ್ರೀ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು.
ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಡಾ.ಚಕ್ರಪಾಣಿ ಅವರು “ಇಂತಹ ಕೃತಿಗಳಿಂದ ಜನರಿಗೆ ಬಹಳ ಉಪಯೋಗ ಹಾಗೂ ವೈದ್ಯರ ಮತ್ತು ರೋಗಿಗಳ ಸಮಯ ಉಳಿತಾಯ” ಎಂದು ಡಾ. ಚಕ್ರಪಾಣಿ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆ ಮಾಡಿದ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ಫಿಸಿಷಿಯನ್ ಆದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅವರು “ಡಾ.ಚೂಂತಾರು ಅವರು ಬರೆದ ಧನ್ವಂತರಿ ಪುಸ್ತಕವು ವಿವಿಧ ರೋಗ ಲಕ್ಷಣಗಳು ಹಾಗೂ ವಿವರವನ್ನು ನೀಡುವ ಕೃತಿಯಾಗಿದ್ದು ಓದಿಸಿಕೊಂಡು ಹೋಗುವ ಗುಣವುಳ್ಳ ಭಾಷೆ ಹೊಂದಿದೆ. ಜೀವನ ಶೈಲಿ ಬದಲಾಯಿಸಿಕೊಂಡು ರೋಗದಿಂದ ದೂರ ಉಳಿಯಬಹುದಾದ ಸಲಹೆಗಳು ಮತ್ತು ಭವಿಷ್ಯದಲ್ಲಿ ವೈದ್ಯಕೀಯ ಎಂಬ ವೈದ್ಯಕೀಯ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬಲ್ಲ ಅಧ್ಯಾಯ ಹೊಂದಿದೆ. ವೈದ್ಯ ನಿಂತ ನೀರಾಗದೆ ನಿರಂತರ ಅಧ್ಯಯನ ಮತ್ತು ಅಭ್ಯಾಸಶೀಲನಾಗಬೇಕು” ಎಂದು ನುಡಿದರು.
ಇನ್ನೋರ್ವ ಅತಿಥಿ ಡಾ.ಕಿಶನ್ ರಾವ್ ಬಾಳಿಲ ಅವರು ಮಾತನಾಡಿ ವೈದ್ಯನ ಪರಿಣತಿ, ಕೌಶಲ್ಯ, ರೋಗ ವಿಧಾನ ಮತ್ತು ಔಷಧಿಯ ಜೊತೆಗೆ ರೋಗಿಯ ಶ್ರದ್ಧೆ ಮತ್ತು ನಂಬಿಕೆಗಳೂ ಕೆಲಸ ಮಾಡುತ್ತದೆ.” ಎಂದು ಅಭಿಪ್ರಾಯಪಟ್ಟರು. ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಸೀನ ಪೂಜಾರಿ ಶುಭ ಹಾರೈಸಿದರು. ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರೇವಣಕರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಭಾರತೀ ಕಾಲೇಜು ಇದರ ಖಜಾಂಚಿ ಉದಯಶಂಕರ್ ನೀರುಪಾಜೆ, ಮಂಗಳೂರು ಹವ್ಯಕ ಸಭಾದ ಅಧ್ಯಕ್ಷೆ ಶ್ರೀಮತಿ ಗೀತಾಗಣೇಶ್ ಉಪಸ್ಥಿತರಿದ್ದರು. ಧನ್ವಂತರಿ ಮಂತ್ರ ಪಠಣದೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಲೇಖಕ ಡಾ.ಮುರಲಿ ಮೋಹನ್ ಚೂಂತಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿ, ಗಣೇಶ್ ಪ್ರಸಾದ್ ಜಿ ಅವರು ವಂದಿಸಿದರು.