ಮುಂಬೈ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಆಶ್ರಯದಲ್ಲಿ ದಿನಾಂಕ 23 ಜನವರಿ 2026ರಂದು ವಿದ್ಯಾನಗರಿ ಕಲೀನ ಕ್ಯಾಂಪಸ್ ನ ರಾನಡೆ ಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಖ್ಯಾತ ಕವಿ, ಚಿಂತಕ, ರಾಜಕೀಯ ನೇತಾರ ದಿನಕರ ದೇಸಾಯಿಯವರ ಮೊಮ್ಮಗ ಉದ್ಯಮಿ ರಣಜಿತ್ ಪ್ರಧಾನ್ “ಐವತ್ತರ ದಶಕದಲ್ಲಿ ಅಂಕೋಲಾದಲ್ಲಿ ಬಹುತೇಕ ಹಿಂದುಳಿದ ವರ್ಗದವರು ಹಾಗೂ ಆದಿವಾಸಿ ಜನರು ಅವಿದ್ಯಾವಂತರಾಗಿದ್ದರು. ಆ ಕೊರತೆಯನ್ನು ಮನಗಂಡು ಅಲ್ಲಿನ ಸ್ಥಳೀಯ ಜನರು ಶಿಕ್ಷಣ ಸಂಸ್ಥೆಯೊಂದನ್ನು ತೆರೆಯುವ ಉದ್ದೇಶದಿಂದ ದಿನಕರ ದೇಸಾಯಿಯವರ ಸಹಕಾರವನ್ನು ಕೋರಿದರು. ದೇಸಾಯಿಯವರು ಅದಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ‘ಕೆನರಾ ವೆಲ್ಫೇರ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ಸ್ಥಾಪಿಸುವ ಕಾರ್ಯ ಯೋಜನೆಯನ್ನು ಕೈಗೊಂಡು, ಆ ಮೂಲಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಆ ಮುಖಾಂತರ ಗ್ರಾಮೀಣ ಭಾಗದಲ್ಲಿ ಹೊಸ ಬೆಳಕು ಮೂಡಿತು. ದೇಸಾಯಿಯವರು ಭಾರತ ಸೇವಕ ಸಮಾಜದ ಆಜೀವ ಸದಸ್ಯರಾಗಿದ್ದು ಸಮಾಜವಾದಿ ಚಿಂತಕರಾಗಿ ಮಾಡಿದ ಸಮಾಜ ಸೇವೆಗೆ ಬಹು ಆಯಾಮಗಳಿವೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಜನರು ಮತ್ತು ರೈತರು ನಿಧಿ ಸಂಗ್ರಹಣೆ ಮಾಡಿ, ಶಾಲಾ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಹಕಾರವನ್ನು ನೀಡಿದರು. ನಂತರದ ವರ್ಷಗಳಲ್ಲಿ ದಿನಕರ ದೇಸಾಯಿಯವರು ಮುಂಬೈಯ ವಾಣಿಜ್ಯೋದ್ಯಮಿಗಳಿಂದ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಂದ ದೇಣಿಗೆಗಳನ್ನು ಸಂಗ್ರಹಿಸಿ ಒಂದರ ಹಿಂದೆ ಮತ್ತೊಂದರಂತೆ ವಿದ್ಯಾಸಂಸ್ಥೆಗಳನ್ನು ತೆರೆದರು. ಇದರಿಂದ ಆ ಭಾಗದ ಜನ ಕಲ್ಯಾಣ ಸಾಧ್ಯವಾಯಿತು. ನನ್ನ ತಂದೆ ವಿಜಯ ಪ್ರಧಾನ್ ಅವರು ಮುಂಬೈ ಹೈಕೋರ್ಟ್ ನಲ್ಲಿ ಖ್ಯಾತ ನ್ಯಾಯವಾದಿಯಾಗಿದ್ದರು. ನನ್ನ ಅಜ್ಜ ದಿನಕರ ದೇಸಾಯಿಯವರಂತೆ ಅವರು ಕೂಡ ಸಮಾಜವಾದದ ಬಗೆಗೆ ಒಲವನ್ನು ಹೊಂದಿದ್ದರು. ಅಜ್ಜನ ಕಾಲಾನಂತರ ನನ್ನ ತಾಯಿ ಉಷಾ ಪ್ರಧಾನ್ ಅವರು ಕೆನರಾ ವೆಲ್ಫೇರ್ ಟ್ರಸ್ಟಿನ ಟ್ರಸ್ಟಿಯಾಗಿದ್ದರು. ನಾನು ಕೂಡಾ ಅಂಕೋಲೆಗೆ ಆಗಾಗ ಹೋಗುತ್ತೇನೆ. ಆದರೆ ನನಗೆ ಪ್ರಾದೇಶಿಕ ಭಾಷೆ ಮಾತನಾಡಲು ಬರುವುದಿಲ್ಲ. ಭಾಷೆ ಜನರ ನಡುವೆ ಸಂವಹನ ಸಾಧಿಸುವ ಸಾಧನ. ನಾವು ಐತಿಹಾಸಿಕವಾಗಿ ನೋಡಿದರೆ ಬ್ರಿಟಿಷರ ಕಾಲದಲ್ಲಿನ ಇಂಗ್ಲೀಷ್ ವಿದ್ಯಾಭ್ಯಾಸದಿಂದಾಗಿ ಭಾರತೀಯರು ಹೊಸ ಆಲೋಚನೆಗಳನ್ನು ಸ್ವೀಕರಿಸಿದರು. ದೇಸಾಯಿಯವರು ತಮ್ಮ ಶಿಕ್ಷಣಕ್ಕಾಗಿ ಬೆಂಗಳೂರು, ಮೈಸೂರು ಹಾಗೂ ಮುಂಬೈಗೆ ತೆರಳಿದ ಕಾರಣದಿಂದ ಆ ಕಾಲದಲ್ಲಿ ಅವರಿಗೆ ಉನ್ನತ ವಿದ್ಯಾಭ್ಯಾಸ ಪಡೆಯುವುದು ಸಾಧ್ಯವಾಯಿತು. ಆದ್ದರಿಂದಲೇ ಅವರು ಜಾಗತಿಕ ಮಟ್ಟದ ವಿಚಾರಗಳನ್ನು ಕನ್ನಡ ಭಾಷೆಯ ಮೂಲಕ ಸಾಮಾನ್ಯ ಜನತೆಗೆ ತಲುಪಿಸಿದರು. ಗುಣಮಟ್ಟದ ಶಿಕ್ಷಣವನ್ನು ಪಡೆದರೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದ್ದರಿಂದ ಉತ್ತಮ ಶಿಕ್ಷಣ ಎಲ್ಲರಿಗೂ ದೊರಕುವುದು ಅತ್ಯಗತ್ಯ. ಕನ್ನಡದ ಮೇರು ಸಾಹಿತಿ ಡಾ. ಶಿವರಾಮ ಕಾರಂತರದು ಭವ್ಯವಾದ ವ್ಯಕ್ತಿತ್ವ. ಅವರನ್ನು ಕಂಡು ಮಾತನಾಡಿದ ನೆನಪು ನನಗಿನ್ನೂ ಹಚ್ಚ ಹಸುರಾಗಿದೆ. ದಿನಕರ ದೇಸಾಯಿಯವರು ಶಿಸ್ತಿನ ವ್ಯಕ್ತಿಯಾಗಿದ್ದರು” ಎಂದು ಅವರು ಈ ಸಂದರ್ಭದಲ್ಲಿ ಅಜ್ಜನೊಂದಿಗೆ ಒಡನಾಡಿದ ನೆನಪುಗಳನ್ನು ಹಂಚಿಕೊಂಡರು.

ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಪ್ರೊ. ಜಿ.ಎನ್. ಉಪಾಧ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಬಹುಮುಖಿಯಾಗಿ ತಮ್ಮನ್ನು ತಾವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಬದುಕಿದ ಘನ ವ್ಯಕ್ತಿತ್ವದ ದಿನಕರ ದೇಸಾಯಿಯವರು ಮಾಡಿದ ಸಾಂಸ್ಕೃತಿಕ ಪರಿಚಾರಿಕೆ ಅನನ್ಯವಾದುದು. 1948ರಿಂದ 1961ರವರೆಗೆ ಮೂರು ಅವಧಿಗೆ ಮುಂಬೈ ಮಹಾನಗರ ಮಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ದಿನಕರ ದೇಸಾಯಿ ಅವರು ಮಾಡಿದ ಕೆಲಸ ಕಾರ್ಯಗಳು ಹತ್ತು ಹಲವು. ಅದನ್ನೆಲ್ಲ ಅಧ್ಯಯನ ಮಾಡಿ ಸುರೇಖಾ ಹರಿಪ್ರಸಾದ್ ಶೆಟ್ಟಿಯವರು ತಮ್ಮ ಮಹಾ ಪ್ರಬಂಧದಲ್ಲಿ ದಾಖಲಿಸಲಿದ್ದಾರೆ” ಎಂದು ನುಡಿದರು.
ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ದಿನಕರ ದೇಸಾಯಿಯವರ ಸಂಶೋಧನ ಪ್ರಬಂಧ ‘ಕಲ್ಯಾಣಿ ಚಾಲುಕ್ಯರ ಅಧೀನರಾಗಿದ್ದ ಮಹಾಮಂಡಲೇಶ್ವರರು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಡಾ. ಉಮಾ ರಾಮರಾವ್ ಅವರು ಸಂವಾದದಲ್ಲಿ ಪಾಲ್ಗೊಂಡರು. ವಿಭಾಗದ ವತಿಯಿಂದ ರಣಜಿತ್ ಪ್ರಧಾನ್ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಶೋಧನ ವಿದ್ಯಾರ್ಥಿಗಳಾದ ಕಲಾಭಾಗ್ವತ್, ಅನಿತಾ ತಾಕೊಡೆ, ಸುರೇಖಾ ದೇವಾಡಿಗ, ಪ್ರತಿಭಾ ರಾವ್, ಸುರೇಖಾ ಶೆಟ್ಟಿ, ಸವಿತಾ ಅರುಣ್ ಶೆಟ್ಟಿ, ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
