ಅಂಕೋಲಾ : ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯು ಹೊನ್ನಾಳಿಯ ಶಿಕ್ಷಕ ಹಾಗೂ ಲೇಖಕ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಕಾವ್ಯ ಸಂಕಲನಕ್ಕೆ ಲಭಿಸಿದೆ. ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 72 ಸಂಕಲನಗಳು ಬಂದಿದ್ದವು. ಬೆಂಗಳೂರಿನ ಎಚ್.ಎಲ್. ಪುಷ್ಪಾ, ಸುಬ್ಬು ಹೊಲಿಯಾರ, ಧಾರವಾಡದ ಬಸು ಬೇವಿನಗಿಡದ ಹಾಗೂ ಡಾ. ಶ್ರೀಧರ ಹೆಗಡೆ ಭದ್ರನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪ್ರಶಸ್ತಿಯನ್ನು ದಿನಾಂಕ 10 ನವೆಂಬರ್ 2024ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ದಿನಕರ ದೇಸಾಯಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮೋಹನ ಹಬ್ಬು ತಿಳಿಸಿದ್ದಾರೆ.
ಸದಾಶಿವ ಸೊರಟೂರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಮಲೇ ಬೆನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ (ಕವನ ಸಂಕಲನ), ದೇವರೆ ಅವಳು ಸಿಗದಿರಲಿ (ಪ್ರೇಮಪತ್ರಗಳು), ಆ ಹಾದಿ ( ಒಂದು ರಸ್ತೆಯ ಕಥಾನಕ), ಅರ್ಧ ಬಿಸಿಲು ಅರ್ಧ ಮಳೆ (ಕಥಾ ಸಂಕಲನ), ಕಂಡಕ್ಟರ್ ಕವಿತೆಗಳು (ಕವಿತೆಗಳು), ಗಾಯಗೊಂಡ ಸಾಲುಗಳು (ಕವನ ಸಂಕಲನ), ನಿನ್ನ ಬೆರಳು ತಾಕಿ (ಕವನ ಸಂಕಲನ), ಕೊಲ್ಲುವುದಕ್ಕೆ ಸದ್ದುಗಳಿವೆ (ಕವನ ಸಂಕಲನ) ಮತ್ತು ಧ್ಯಾನಕ್ಕೆ ಕೂತ ನದಿ (ಕಥಾ ಸಂಕಲನ) ಇವು ಇವರ ಪ್ರಕಟವಾಗಿರುವ ಕೃತಿಗಳು.
2021ನೇ ಸಾಲಿನ ‘ಹರಿಹರಶ್ರೀ ಪ್ರಶಸ್ತಿ’, 2023ನೇ ಸಾಲಿನ ‘ಬಳ್ಳಾರಿ ಎನ್. ಗವಿಸಿದ್ದ ಕಾವ್ಯಪುರಸ್ಕಾರ’, 2023ನೇ ಸಾಲಿನ ‘ಕಾವ್ಯಸಂಜೆ ಕಾವ್ಯ ಪುರಸ್ಕಾರ’, 2023ನೇ ಸಾಲಿನ ‘ಭೂಮಿ ಸಾಹಿತ್ಯ ಪುರಸ್ಕಾರ’, ಕ.ಸಾ.ಪ. ಕೊಡುವ ‘ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ’, 2024ನೇ ‘ಈ ಹೊತ್ತಿಗೆ ಕಥಾ ಪುರಸ್ಕಾರ’, 2024ನೇ ಸಾಲಿನ ಮಂಗಳೂರಿನ ‘ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರ’ ಮತ್ತು 2024ನೇ ‘ವಿಭಾ ಪ್ರಶಸ್ತಿ’ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. ‘ಭಂಟಿ’ ಎಂಬ ಕಥೆಯು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.