ಮಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷೋತ್ಸವ ಸಮಿತಿ ಹಾಗೂ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾಗವತ ದಿನೇಶ ಅಮ್ಮಣ್ಣಾಯ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ ದಿನಾಂಕ 18 ಅಕ್ಟೋಬರ್ 2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಮ್ಮಣ್ಣಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಂಗಳೂರು ಯಕ್ಷಾಂಗಣದ ಕಾರ್ಯಾಧ್ಯಕ್ಷ , ಹಿರಿಯ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ಯಕ್ಷಗಾನ ರಂಗದ ಬೆರಳೆಣಿಕೆಯ ಮಹಾನ್ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಪ್ರಮುಖರು. ಅವರದು ಶತಮಾನದ ಗಾನ. ಸಂಗೀತ ವಿದ್ವಾನ್ ಬಿ. ದಾಮೋದರ ಮಂಡೆಚ್ಚರ ಸಮರ್ಥ ಉತ್ತರಾಧಿಕಾರಿಯಾಗಿ ಯಕ್ಷ ಸಂಗೀತದ ಶ್ರೇಷ್ಠ ಮಾದರಿಯನ್ನು ನೀಡಿದ ಅವರು ನಿಜಾರ್ಥದಲ್ಲಿ ರಸರಾಗ ಚಕ್ರವರ್ತಿ. ಅಮ್ಮಣ್ಣಾಯರ ನಿರ್ಗಮನ ಕೇವಲ ಅವರ ಕುಟುಂಬಕ್ಕೆ ಆದ ನಷ್ಟವಲ್ಲ; ಅದು ಕರಾವಳಿ ಕರ್ನಾಟಕದ ಸಮಗ್ರ ಕಲಾ ರಂಗಕ್ಕಾದ ದೊಡ್ಡ ನಷ್ಟ” ಎಂದವರು ಖೇದ ವ್ಯಕ್ತಪಡಿಸಿದರು.
ಕರ್ನಾಟಕ ಮೇಳದಲ್ಲಿ ಅಮ್ಮಣ್ಣಾಯರ ಒಡನಾಡಿ ಕಲಾವಿದರಾದ ಖ್ಯಾತ ಸ್ತ್ರೀ ವೇಷಧಾರಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಮಾತನಾಡಿ “ಕರುಣ ರಸದ ಪದ್ಯಗಳಲ್ಲಿ ಅಮ್ಮಣ್ಣಾಯರು ಹಾಡಿದರೆ ಎಂತಹ ಕಲಾವಿದನಾದರೂ ರಂಗದಲ್ಲಿ ಆ ಪಾತ್ರವೇ ಆಗಿಬಿಡುತ್ತಿದ್ದ. ದ್ರೌಪದಿ ವಸ್ತ್ರಾಪಹಾರ, ಸತ್ಯ ಹರಿಶ್ಚಂದ್ರ, ನಳ ದಮಯಂತಿ, ಮಾ ನಿಷಾದ, ಕೋಟಿ ಚೆನ್ನಯ, ಕಾಡ ಮಲ್ಲಿಗೆ ಮೊದಲಾದ ಕನ್ನಡ- ತುಳು ಪ್ರಸಂಗಗಳಲ್ಲಿ ಅವರ ಹಾಡುಗಾರಿಕೆಗೆ ಕಲಾವಿದರು ಮಾತ್ರವಲ್ಲದೆ ಪ್ರೇಕ್ಷಕರೂ ಮಂತ್ರಮುಗ್ಧರಾಗುತ್ತಿದ್ದರು” ಎಂದರು.
ಭಾಗವತ ಮತ್ತು ಪ್ರಸಂಗ ಕರ್ತ ಹರೀಶ್ ಶೆಟ್ಟಿ ಸೂಡ ಮಾತನಾಡಿ “ತನ್ನ ಮಣಿ ಮಂದಾರೆ ಪ್ರಸಂಗವು ಕರ್ನಾಟಕ ಮೇಳದಲ್ಲಿ ಹತ್ತು ವರ್ಷ ಜಯಭೇರಿ ಬಾರಿಸಲು ಅಮ್ಮಣ್ಣಾಯರ ಹಾಡುಗಾರಿಕೆ ಕಾರಣ. ಅವರ ಭಾಗವತಿಗೆಯನ್ನು ಯಾರಿಗೂ ಅನುಕರಣೆ ಮಾಡಲು ಸಾಧ್ಯವಾಗದು” ಎಂದು ಹೇಳಿದರು.
ಯಕ್ಷೋತ್ಸವದ ಸಂಚಾಲಕ ಮತ್ತು ಪ್ರಾಧ್ಯಾಪಕ ಪ್ರೊ. ಪುಷ್ಪರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ತಮ್ಮ ಅನುಪಮವಾದ ಕಂಠ ಮಾಧುರ್ಯ ಮತ್ತು ಪರಿಶುದ್ಧ ವ್ಯಕ್ತಿತ್ವದಿಂದ ಸರ್ವ ಜನಾದರಣೀಯರಾದ ಶ್ರೇಷ್ಠ ಭಾಗವತ ದಿನೇಶ್ ಅಮ್ಮಣ್ಣಾಯರು. ಅವರು ಓರ್ವ ಮಾರ್ಗದರ್ಶಕ ಕಲಾವಿದ” ಎಂದು ನುಡಿದರು.
ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಬೊಂದೇಲ್, ನ್ಯಾಯವಾದಿ ರಾಮಚಂದ್ರ ಭಟ್, ಪಟ್ಲ ಫೌಂಡೇಶನ್ ಇದರ ಸುಬ್ರಹ್ಮಣ್ಯ ಭಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಮೀನಾಕ್ಷಿ ರಾಮಚಂದ್ರ, ಅರುಣಾ ನಾಗರಾಜ್, ಯಕ್ಷೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ದಿನೇಶ್ ಅಮ್ಮಣ್ಣಾಯರ ಭಾವಚಿತ್ರಕ್ಕೆ ದೀಪ ಬೆಳಗಿ, ಎಲ್ಲರೂ ಪುಷ್ಪಾರ್ಚನೆ ಮಾಡಿ ಬಳಿಕ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

