ಮಲ್ಪೆ : ಕಡೆಕಾರು ಕಿದಿಯೂರು ಶ್ರೀ ಬ್ರಹ್ಮಬೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿಯ ವಜ್ರ ಮಹೋತ್ಸವ ಸಮಾರಂಭ ದಿ. ತೋನ್ಸೆ ಜಯಂತ್ ಕುಮಾರ್ ನಿರ್ದೇಶಿಸಲ್ಪಟ್ಟ ಆಯ್ದ ಹವ್ಯಾಸಿ ಯಕ್ಷಗಾನ ಸಂಘಗಳ ಯಕ್ಷಗಾನ ಸ್ಪರ್ಧೆಯ ಸಮಾರೋಪವು ದಿನಾಂಕ 10-02-2024ರಂದು ಕಿದಿಯೂರು ಗರಡಿ ವಠಾರದಲ್ಲಿ ಜರಗಿತು.
ಯಕ್ಷಗಾನ ಸ್ಪರ್ಧೆಯಲ್ಲಿ ಕುತ್ಪಾಡಿಯ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಥಮ ಸ್ಥಾನ ಹಾಗೂ ತೊಟ್ಟಂ ಗಜಾನನ ಯಕ್ಷಗಾನ ಕಲಾ ಮಂಡಳಿ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದೆ. ಅತ್ಯುತ್ತಮವಾಗಿ ಅಭಿನಯಿಸಿದ ಕಲಾವಿದರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗಿದೆ.
ಕಲ್ಮಾಡಿ ಬ್ರಹ್ಮಬೈದರ್ಕಳ ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಚುತ ಅಮೀನ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಣ್ಣದ ವೇಷಧಾರಿ ಎಲ್ಲಂಪಳ್ಳಿ ಜಗನ್ನಾಥ ಆಚಾರ್ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಗುರು ಕೆ. ರತ್ನಾಕರ ಆಚಾರ್ಯ ಅವರಿಗೆ ಗುರುವಂದನೆ ನೀಡಲಾಯಿತು. ಸಂಘದ ಹಿರಿಯ ಸದಸ್ಯರಾದ 13 ಮಂದಿಯನ್ನು ಸಮ್ಮಾನಿಸಲಾಯಿತು. ಕಡೆಕಾರು ಮತ್ತು ಕಿದಿಯೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಂಐಟಿಯ ಪ್ರಾಧ್ಯಾಪಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ “ಆತ್ಮವಿಶ್ವಾಸವನ್ನು ಬೆಳೆಸುವ ಸುಸಂಸ್ಕೃತ ಸಂಪ್ರದಾಯ ನಮ್ಮಲ್ಲಿ ಬರಬೇಕು. ಇದು ಯಕ್ಷಗಾನದಿಂದ ಸಾಧ್ಯ. ಸಂಘ ಸಂಸ್ಥೆಗಳು ಆಗಾಗ ಮಕ್ಕಳ ಯಕ್ಷಗಾನ ಸ್ಪರ್ಧೆ, ಕಮ್ಮಟಗಳನ್ನು ನಡೆಸುವ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ” ಎಂದರು.
ಶಾಸಕ ಯಶ್‌ಪಾಲ್ ಸುವರ್ಣ, ಕಾಂಚನ ಹುಂಡೈನ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಕಡೆಕಾರು ಗ್ರಾ. ಪಂ. ನ ಅಧ್ಯಕ್ಷ ಜಯಕರ್ ಸೇರಿಗಾರ್, ಅಂಬಲಪಾಡಿ ಗ್ರಾ. ಪಂ.ನ ಅಧ್ಯಕ್ಷೆ ಸುಜಾತಾ ವೈ. ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು, ಕಿದಿಯೂರು ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸುಧಾಕರ್ ಕಲ್ಮಾಡಿ, ಕಡೆಕಾರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಂಕರ್ ಜಿ. ಸುವರ್ಣ, ಉದ್ಯಮಿ ರವಿರಾಜ್ ಕಿದಿಯೂರು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನಿರ್ದೇಶಕ ಐರಿನ್ ಎಲ್. ಅಂದ್ರಾದೆ, ಸಂಘದ ಗೌರವಾಧ್ಯಕ್ಷರಾದ ಜಯಶೀಲ ಕಿದಿಯೂರು, ಧರ್ಮಪಾಲ ಕಡೆಕಾರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಪ್ರಸಾದ್ ಟಿ.ಆರ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಡಿ. ಪಾಲನ್ ವರದಿ ವಾಚಿಸಿದರು. ದಯಾನಂದ ಉಗ್ಗೆಲ್ ಬೆಟ್ಟು ಮತ್ತು ಭಾಸ್ಕರ ಸುವರ್ಣ ಕನ್ನರ್ಪಾಡಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಕಿದಿಯೂರು ವಂದಿಸಿದರು.