ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗು ಜನ ಸಾಮಾನ್ಯರಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ತಲುಪಿಸಲು ನಾಡೋಜ ಡಾ. ಮಹೇಶ ಜೋಶಿಯವರು ಅಧ್ಯಕ್ಷರಾದ ನಂತರ ಅನೇಕ ವಿಶಿಷ್ಟ ಯೋಜನೆಗಳನ್ನು ಹಮ್ಮಿ ಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಇದವರೆಗೂ ಎರಡು ಸಾವಿರಕ್ಕೂ ಹೆಚ್ಚು ಮಹತ್ವದ ಪ್ರಕಟಣೆಗಳನ್ನು ಪ್ರಕಟಿಸಿದ್ದು, ಅದನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ದೃಷ್ಟಿಯಿಂದ ವರ್ಷದಲ್ಲಿ ನಾಲ್ಕು ಸಂದರ್ಭದಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ.
ಕನ್ನಡ ರತ್ನಕೋಶ ಮತ್ತು ಸಂಕ್ಷಿಪ್ತ ಕನ್ನಡ ನಿಘಂಟು, ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟು, ಬೃಹತ್ ಕನ್ನಡ ಕನ್ನಡ ನಿಘಂಟು, ಗದ್ಯಾನುವಾದ, ಶತಮಾನೋತ್ಸವದ ಮಾಲಿಕೆ ಪುಸ್ತಕಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಎಲ್ಲಾ ಸಂಪುಟಗಳು, ಮಹಿಳಾ ಸಾಹಿತ್ಯ ಸಂಪುಟಗಳು, ಕ. ಸಾ. ಪ. ಪರೀಕ್ಷೆ ಪುಸ್ತಕಗಳು, ಪಿ. ಹೆಚ್. ಡಿ. ಪುಸ್ತಕಗಳು, ದಲಿತ ಸಾಹಿತ್ಯ ಸಂಪುಟಗಳು, ಜೀವನ ಚರಿತ್ರೆಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳು ಹಾಗೂ ಇತರೆ ಪ್ರಕಟಣೆಗಳ ಪ್ರದರ್ಶನ, ಮಾರಾಟ ಹಾಗೂ ಅಪರೂಪದ ಸಂಶೋಧನಾ ಕೃತಿಗಳು ಮಾರಾಟಕ್ಕೆ ಲಭ್ಯ ಇರುತ್ತವೆ. ವಿದ್ಯಾರ್ಥಿಗಳು, ಸಂಶೋಧಕರು, ಸಾಹಿತ್ಯಾಸಕ್ತರು, ಜನಸಾಮಾನ್ಯರೂ ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಉಪಯುಕ್ತವಾಗಬಲ್ಲ ಕೃತಿಗಳನ್ನು ನವೆಂಬರ್ ತಿಂಗಳಿಡೀ ಶನಿವಾರ, ಭಾನುವಾರಗಳೂ ಸೇರಿದಂತೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7.00 ಗಂಟೆಯವರೆಗೂ ಶೇ 10ರಿಂದ ಶೇ 75ರವರೆಗೆ ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಈ ಸೌಲಭ್ಯದ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ನಾಡೋಜ ಡಾ. ಮಹೇಶ ಜೋಶಿಯವರು ಸಮಸ್ತ ಕನ್ನಡಿಗರನ್ನು ವಿನಂತಿಸಿಕೊಂಡಿದ್ದಾರೆ.