ಶಿವಮೊಗ್ಗ : ಶಿವಮೊಗ್ಗದ ದುರ್ಗಿಗುಡಿ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ‘ಬೆಳಗಿನೊಳಗು’ ಕಾದಂಬರಿ ಕುರಿತು ಎಚ್. ಎಸ್. ಅನುಪಮಾ ಅವರೊಂದಿಗಿನ ಸಂವಾದ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2024ರ ಶನಿವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಕೇಶವಶರ್ಮ ಮಾತನಾಡಿ ಲೇಖಕಿ ಎಚ್. ಎಸ್. ಅನುಪಮಾ ಅವರ ‘ಬೆಳಗಿನೊಳಗು’ ಎಂಬ ಕಾದಂಬರಿ ಕಾದಂಬರಿಯ ಯುಗದಲ್ಲಿಯೇ ಬಂದ ಮಹಾಕಾವ್ಯ ಎಂದರು. ಮಹಾಕಾವ್ಯಗಳ ಬರವಣಿಗೆ ವಿಶಿಷ್ಟವಾದುದು. ಆದರೆ ಈಗಿನ ಕಾದಂಬರಿ ಯುಗದಲ್ಲಿ ‘ಬೆಳಗಿನೊಳಗು’ ಕೃತಿಯಲ್ಲಿ ಮಹಾಕಾವ್ಯದ ಚಹರೆ ದಟ್ಟವಾಗಿದೆ. ಇದು ಕೇವಲ ಕಾದಂಬರಿ ಅಲ್ಲ, ಸಾಂಸ್ಕೃತಿಕ ಪಠ್ಯ. ಕಾದಂಬರಿಯನ್ನು ಓದುತ್ತಾ ಹೋದಂತೆ ನಮ್ಮನ್ನು 12ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ವಚನ ಸಾಹಿತ್ಯ ಅಥವಾ ವಚನಗಳನ್ನು ಓದುವುದಕ್ಕೆ ಒಂದಷ್ಟು ಪರಿಕರಗಳು ಬೇಕಾಗುತ್ತವೆ. ಅಂತಹ ಓದಿನ ಆರಂಭಕ್ಕೆ ಈ ಕಾದಂಬರಿ ಸಹಾಯಕವಾಗುತ್ತದೆ. ಬಸವಣ್ಣನನ್ನು ಅವತಾರ ಪುರುಷನೆಂಬಂತೆ ಓದುತ್ತೇವೆ. ಆದರೆ ಈ ಕಾದಂಬರಿ ಓದಿದಾಗ ಅಕ್ಕ ಅವತಾರ ಪುರುಷಳೆಂಬಂತೆ ಕಾಣುವುದಿಲ್ಲ. ಬದಲಿಗೆ ನಮ್ಮ ಮನೆಯ ಅಕ್ಕಪಕ್ಕದ ಮಹಿಳೆ ಮಾತನಾಡಿದಂತೆ ಬಾಸವಾಗುತ್ತದೆ. ಅಕ್ಕಮಹಾದೇವಿ ಕೇವಲ ವ್ಯಕ್ತಿಯಾಗಿ ಬರದೆ ಅದರ ಆಚೆಗೆ ವ್ಯಕ್ತಿತ್ವವಾಗಿ ಗೋಚರವಾಗುತ್ತಾ ಹೋಗುತ್ತಾಳೆ. ಕಾದಂಬರಿಯು ಅಕ್ಕನ ಅಥವಾ ಅಕ್ಕನ ವಚನಗಳ ಶ್ರೇಷ್ಠತೆಯ ಬದಲಿಗೆ ಇಡೀ 12ನೇ ಶತಮಾನದ ವಚನ ಚಳವಳಿಯ ಶ್ರೇಷ್ಠತೆ ಮತ್ತು ಮಹತ್ವವನ್ನು ಸಾರುತ್ತದೆ.” ಎಂದರು. ಎಚ್. ಎಸ್. ಅನುಪಮಾ ಓದುಗರೊಂದಿಗೆ ಸಂವಾದ ನಡೆಸಿದರು.