ಕಾಸರಗೋಡು : ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯು ದಿನಾಂಕ 03-09-2023 ರಂದು ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಧಾರ್ಮಿಕ ಮುಂದಾಳು ಮತ್ತು ಸಮಾಜ ಸೇವಕಿಯಾದ ಮೀರಾ ಕಾಮತ್ “ಭಗವಂತನನ್ನು ತೃಪ್ತಿಪಡಿಸಲು ಭಜನೆಯು ಪ್ರಮುಖ ಮಾರ್ಗಗಳಲ್ಲಿ ಒಂದು. ಸಂಕೀರ್ತನೆಯಲ್ಲಿ ಭಕ್ತಿಯೂ ಅಡಕವಾಗಿರಬೇಕು. ಭಕ್ತಿಪೂರ್ವಕವಾಗಿ ಭಗವಂತನನ್ನು ಭಜಿಸಿದರೆ ಎಲ್ಲಾ ದುರಿತಗಳು ಪರಿಹಾರಗೊಳತ್ತವೆ. ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡುತ್ತದೆ” ಎಂದು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ನಾಯ್ಕ, ರಾಮದಾಸ್, ನಿರ್ಮಲಾ, ಕುಶಲಕುಮಾರ್, ಮೇಘರಾಜ್, ಶ್ರೀಕಾಂತ್ ಕಾಸರಗೋಡು, ಯೋಗೀಶ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 28 ತಂಡಗಳು ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದವು. ನೃತ್ಯ ಕಲಾವಿದೆ ಸುಚಿತ್ರಾ ಭಾರತಿ, ಭಜನಾ ಸಾಮ್ರಾಟ್ ಮೋಹನ ಆಚಾರ್ಯ ಪುಳ್ಳೂರು ಮತ್ತು ಕವಿ ಹಾಗೂ ಲೇಖಕ ವಿಷ್ಣು ಶ್ಯಾನುಭೋಗ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಶ್ರೀಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಾವ್ಯಾ ಕುಶಲ ವಂದಿಸಿ, ಸಂಘಟಕ ಕೆ.ಜಗದೀಶ್ ಕೂಡ್ಲು ಮತ್ತು ಅಶ್ವಿನಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಈ ಭಾಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀ ಅಯ್ಯಪ್ಪ ಕುಣಿತ ಭಾಜನಾ ತಂಡ ಬಾಯಿಕಟ್ಟೆ ಪೈವಳಿಕೆ, ದ್ವಿತೀಯ ಶ್ರೀ ಮಹಾಲಿಂಗೇಶ್ವರ ಕುಣಿತ ಭಾಜನಾ ಸಂಘ ಬಡಾಜೆ ಮಂಜೇಶ್ವರ, ತೃತೀಯ ಶ್ರೀ ಸತ್ಯನಾರಾಯಣ ಕುಣಿತ ಭಾಜನಾ ತಂಡ ಕುಬಣೂರು ಹಾಗೂ ವಿಶೇಷ ಪ್ರೋತ್ಸಾಹಕರ ಬಹುಮಾನವನ್ನು ಅಂಬಾಭವಾನಿ ಪಾದೆಗದ್ದೆ ನೆಟ್ಟಣಿಗೆ- ಬಿ ತಂಡ, ಎಸ್.ಕ.ಕೆ.ಕೆ.ಜಿ ಕುಣಿತ ಭಾಜನಾ ತಂಡ ವಿಕಾಸ ನಗರ ಕಟ್ಟತ್ತಡ್ಕ ಹಾಗೂ ಶ್ರೀ ಅಯ್ಯಪ್ಪ ಕುಣಿತ ಭಾಜನಾ ತಂಡ ಪೆರ್ಲ ತಂಡಗಳು ಪಡೆದುಕೊಂಡಿವೆ.