ಧಾರವಾಡ : ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿನಾಂಕ 02 ಆಗಸ್ಟ್ 2025ರಂದು ಶರ್ವಿಲ್ ಪಬ್ಲಿಷರ್ಸ್ ಆಯೋಜಿಸಿದ್ದ ಶ್ರೀಮತಿ ವಿಜಯಲಕ್ಷ್ಮಿ ಎಸ್. ಜಯಮಂಗಲ ಇವರ ‘ದಿವ್ಯದೃಷ್ಟಿಯ ಗಾಂಧಾರಿ’ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದ ಡಾ. ಶ್ರೀಶಾಚಾರ್ಯ ನಾಮಾವಳಿ “ಲೌಕಿಕ ಬದುಕಿಗೆ ಹತ್ತಿರವಾಗಿರುವ ಮಹಾಭಾರತ ಮಹಾಕಾವ್ಯ ಜೀವನದ ಉನ್ನತ ಮೌಲ್ಯಗಳನ್ನು ಅನಾವರಣಗೊಳಿಸುತ್ತದೆ, ಅಂತರಂಗದ ಕಣ್ಣು ತೆರೆಸಿ, ಹೊಸ ದೃಷ್ಟಿಕೋನ ಒದಗಿಸುತ್ತದೆ. ಮಹಾಭಾರತದ ಅತ್ಯಂತ ವಿಶಿಷ್ಟ ಪಾತ್ರ ಗಾಂಧಾರಿಯದ್ದು. ಕಣ್ಣಿದ್ದು, ಪತಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಿಯಾದರೂ, ತನ್ನ ಅಂತರಂಗದ ದೃಷ್ಟಿಯ ಮೂಲಕ ಮೌಲ್ಯಗಳ ಪ್ರತೀಕವಾಗಿ ಕಥೆಯುದ್ದಕ್ಕೂ ಹರಡಿಕೊಳ್ಳುತ್ತಾಳೆ, ಆವರಿಸಿಕೊಳ್ಳುತ್ತಾಳೆ” ಎಂದು ಅಭಿಪ್ರಾಯಪಟ್ಟರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಕೃಷ್ಣ ಕಟ್ಟಿ “ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ ಎನ್ನುವುದನ್ನು ಮಹಾಭಾರತ ಮಹಾಕಾವ್ಯ ಅತ್ಯಂತ ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಪ್ರಸ್ತುತ ಕೃತಿಯ ನಿರೂಪಣೆ, ಕಥನಶೈಲಿ ಹೊಸರೀತಿಯಿಂದ ಗಮನ ಸೆಳೆಯುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರ್ಷ ಡಂಬಳ ಮಾತನಾಡಿ “ನಮ್ಮ ಪರಂಪರೆಯ ಭಾಗವಾಗಿರುವ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಅತ್ಯಂತ ಮಹತ್ವದ ಕಥೆಗಳು. ರಾಮಾಯಣ ಧಾರ್ಮಿಕ ಮೌಲ್ಯಗಳು, ಆದರ್ಶಗಳ ಅನಾವರಣವಾದರೆ, ಮಹಾಭಾರತ ಭೌತಿಕ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಮಹಾಭಾರತದ ಪ್ರತಿ ಪಾತ್ರವೂ ವಿಶಿಷ್ಟ, ವಿಭಿನ್ನ. ಅಂಥ ಒಂದು ಪಾತ್ರವನ್ನಿಟ್ಟುಕೊಂಡು ಹೊಸ ಆಯಾಮದಲ್ಲಿ ರಚಿತವಾಗಿರುವ ‘ದಿವ್ಯದೃಷ್ಟಿಯ ಗಾಂಧಾರಿ’ ಕೃತಿ ವಿಭಿನ್ನ ಪ್ರಯೋಗ” ಎಂದರು.
ಕಾರ್ಯಕ್ರಮದಲ್ಲಿ ಸಮೀರ ಜೋಶಿ, ರಾಘವೇಂದ್ರ ಜಯಮಂಗಲ, ಪ್ರೊ. ವಿ.ಟಿ. ನಾಯಕ, ಡಾ. ಶಶಿಧರ ನರೇಂದ್ರ ಮತ್ತಿತರ ಸಾಹಿತ್ಯಾಸಕ್ತರು ಇದ್ದರು. ರವಿ ಕುಲಕರ್ಣಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಶಂಕರ ಪುರೋಹಿತ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.