ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು, ಮಂಗಳೂರು ಹವ್ಯಕ ಸಭಾ, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಮಂಗಳೂರು ಸಹಯೋಗದಲ್ಲಿ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಭವನದಲ್ಲಿ ರಾಜ್ಯೋತ್ಸವ ರಸಸಂಜೆ ಕಾರ್ಯಕ್ರಮ ದಿನಾಂಕ 01-11-2023ರಂದು ಜರುಗಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ವೈ.ವಿ. ಗುಂಡೂರಾವ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ “ಆಂಗ್ಲರಿಗೆ ವರ್ಷದಲ್ಲಿ ಎರಡು ತಿಂಗಳು ‘ವರಿ ‘ ಜನವರಿ ಫೆಬ್ರವರಿ, ಉತ್ತರ ಕರ್ನಾಟಕದವರಿಗೆ ಗಂಟೆ ಗಂಟೆಗೆ ‘ವರಿ’ ಆರೂವರಿ ಏಳೂವರಿ, ಬ್ಯಾಂಕ್ ನವರಿಗೆ ರಿಕ’ವರಿ’ ಹೀಗೆ ಎಲ್ಲರಿಗೂ ವರಿ ಇದೆ, ಎಲ್ಲರ ವರಿಯನ್ನೂ ಪರಿಹರಿಸುವವಳು ನಮ್ಮ ಕನ್ನಡ ತಾಯಿ ಭುವನೇಶ್ವರಿ” ಎಂದು ವಿವರಿಸಿದರು. ಕಬಾಲಿಡ ಎಂದರೆ ಕನ್ನಡ (ಕರ್ನಾಟಕ ಬ್ಯಾಂಕ್ ಲಿ. ಡ -ಕನ್ನಡ) ಹಾಸ್ಯಗಳ ಪ್ರಸ್ತುತಿಯ ಮೂಲಕ, ಸಭಾಂಗಣದಲ್ಲಿ ತುಂಬಿದ್ದ ಕನ್ನಡ ಮನಸ್ಸುಗಳನ್ನು ನಗೆಗಡಲಲ್ಲಿ ತೇಲಿಸುವುದರೊಂದಿಗೆ ಹೆಚ್. ಡುಂಡಿರಾಜ್ ಅವರು ಸೈಬರ್ ಅಪರಾಧದ ಬಗ್ಗೆ ಬರೆದ ಅಣಕವಾಡನ್ನು ಹಾಡಿ ರಂಜಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಶೀನ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾ ಗಣೇಶ್ ಉದ್ಘಾಟಿಸಿದರು. ಚೂಂತಾರು ಪ್ರತಿಷ್ಠಾನದ ಗಣೇಶ್ ಸುಂದರ್ ಕೆ.ಜಿ. ಕಸಾಪ ತಾಲೂಕು ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಉಪಸ್ಥಿತರಿದ್ದರು.
ಕಸಾಪ ತಾ. ಘಟಕದ ಗೌ. ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿದರು. ಮಂಗಳೂರು ಹವ್ಯಕ ಸಭಾದ ಸುಮಾ ರಮೇಶ್ ಮತ್ತು ಬಳಗದವರು ನಾಡಗೀತೆ ಹಾಡಿದರು. ರತ್ನಾವತಿ ಜೆ. ಬೈಕಾಡಿ ತಂಡದವರು ಕನ್ನಡ ಗೀತೆಗಳನ್ನು ಹಾಡಿದರು. ಪುಟಾಣಿ ಧಾತ್ರಿ ಕನ್ನಡ ಭುವನೇಶ್ವರಿಯಾಗಿ ಕನ್ನಡ ಅಕ್ಷರದ ಕವನವನ್ನು ಹಾಡಿದಳು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಡಾ. ಮಂಜುನಾಥ ಎಸ್. ರೇವಣ್ಕರ್ ಅವರನ್ನು ಅಭಿನಂದಿಸಲಾಯಿತು. ರೇಖಾ ಶಂಕರ್ ನಿರೂಪಿಸಿ, ಕಸಾಪ ತಾ. ಘಟಕದ ಇನ್ನೋರ್ವ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ವಂದಿಸಿದರು.