ಧಾರವಾಡ : ಅಕ್ಷರ ದೀಪ ಪ್ರಕಾಶನ ಗದಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ 2025ರ ಪ್ರಯುಕ್ತ ಫಾರೆಸ್ಟ್ ಕಾಲೊನಿ ನಿವಾಸಿಯಾಗಿರುವ ಡಾ. ಎ.ಡಿ. ಕೊಟ್ನಾಳ ಇವರ ಬಹುಮುಖ ಸೇವೆಯನ್ನು ಗುರುತಿಸಿ ‘ಕನಕಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಿದ್ದಾರೆ.
ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡವರು ಜೊತೆಗೆ ಸಮಾಜ ಸೇವೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತನ್ನ ಸೇವಾ ಕಾರ್ಯವನ್ನು ಮಾಡಿದವರು. ಸಾಹಿತ್ಯಾಸಕ್ತರಾಗಿರುವ ಇವರು ಕೃಷಿ ಕ್ಷೇತ್ರದಲ್ಲೂ ಕಳೆದ 35 ವರ್ಷಗಳಿಂದ ರೈತ ಸಮುದಾಯದ ಅಭಿವೃಧಿಗೆ ಶ್ರಮಿಸುತ್ತಿದ್ದಾರೆ.
ಡಾ. ಕೊಟ್ನಾಳ ಇವರ ಬಹುಮುಖ ಸೇವೆಗೆ ವಿವಿಧ ಸಂಘ ಸಂಸ್ಥೆಗಳು ನೀಡುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಕ್ಷರ ದೀಪ ಪ್ರಕಾಶನ ಗದಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರು ಕೊಡಮಾಡುವ ‘ಕನಕಶ್ರೀ ರಾಷ್ಟ್ರೀಯ ಪ್ರಶಸ್ತಿ’ಯು ಇವರ ಅಪ್ರತಿಮ ಸಾಧನೆಗೆ ಸಂದ ಗೌರವವಾಗಿದೆ.
ದಿನಾಂಕ 09 ನವೆಂಬರ್ 2025ರ ರವಿವಾರದಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಹಾಗೂ ಕನಕೋತ್ಸವ 2025 ಅದ್ದೂರಿ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆ ಮೂಡಬಿದಿರೆಯ ಶಿಕ್ಷಕ ಸಾಹಿತಿಗಳಾದ ಡಾ. ರಾಮಕೃಷ್ಣ ಶಿರೂರ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಲ್ಲಪ್ಪ ಶಿವಪ್ಪ ವಾಘಮೋರೆ, ಡಾ. ಪ್ರಮೀಳಾ ಎಸ್. ಪಾಟೀಲ್ ಮತ್ತು ಶ್ರೀಮತಿ ಶಿಲ್ಪಾ ವಿ.ಆರ್. ಇವರು ಭಾಗವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಮತ್ತು ಅಕ್ಷರ ದೀಪ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ ಕುಮಾರ ಕನ್ಯಾಳ ಮತ್ತು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯುವುದೆಂದು ಆಯೋಜಕರು ತಿಳಿಸಿದಾರೆ.
