ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದಲ್ಲಿ ನಗರದ ರವೀಂದ್ರ ಕಲಾಭವನದಲ್ಲಿ ನವೆಂಬರ್ 19ರಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ, ಸಪ್ತಾಹ – 2023′ ಹನ್ನೊಂದನೇ ವರ್ಷದ ಕನ್ನಡ ನುಡಿ ಹಬ್ಬದಲ್ಲಿ ಮೂರನೇ ದಿನ ದಿನಾಂಕ 21-11-2023ರಂದು ನಮ್ಮ ಕುಡ್ಲ ಸಂಸ್ಥಾಪಕರಾದ ದಿ| ಬಿ.ಪಿ. ಕರ್ಕೇರ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣ ಜ್ಯೋತಿ ಬೆಳಗಿದ ಮೂಡಬಿದ್ರೆ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್ ಮೂಡುಬಿದಿರೆ ಇವರು ಮಾತನಾಡುತ್ತಾ, “ಕಲೆಯೆಂಬುದು ರಕ್ತಗತವಾಗಿ ತಲೆಮಾರುಗಳಲ್ಲಿ ವಿಸ್ತರಣೆಗೊಳ್ಳುವುದು ಸ್ವಾಭಾವಿಕ. ಆದರೆ ಕಲಾಭಿರುಚಿಯೂ ಹಾಗೆಯೇ. ತಂದೆ ತಾಯಿಗಳಿಂದ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ರಕ್ತಗತವಾಗಿ ಬಂದರೆ ಆಶ್ಚರ್ಯವಿಲ್ಲ. ದಿ| ಬಿ.ಪಿ.ಕರ್ಕೇರರು ಓರ್ವ ಉತ್ತಮ ಪ್ರೇಕ್ಷಕರಾಗಿ ತಮ್ಮ ಮಕ್ಕಳನ್ನು ಎಳವೆಯಲ್ಲಿ ಯಕ್ಷಗಾನಕ್ಕೆ ಕರೆದೊಯ್ಯುತ್ತಿದ್ದುದರಿಂದ ಕರ್ಕೇರ ಸೋದರರಿಗೆ ಅದರಲ್ಲಿ ಅಪಾರ ಆಸಕ್ತಿ ಬೆಳೆಯಿತು. ಅದರಿಂದಾಗಿ ಪ್ರಸ್ತುತ ನಮ್ಮ ಕುಡ್ಲ ವಾಹಿನಿಯಲ್ಲಿ ನಿರಂತರ ಯಕ್ಷಗಾನ ಆಟ ಕೂಟಗಳನ್ನು ನಾವು ನೋಡುವಂತಾಗಿದೆ’ ಎಂದು ಹೇಳಿದರು. ಕಲಾಸಂಘಟಕ, ಲೇಖಕ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ನವನೀತ ಶೆಟ್ಟಿ ಕದ್ರಿ ಸಂಸ್ಮರಣಾ ಭಾಷಣ ಮಾಡಿದರು.
ಸಮಾರಂಭದಲ್ಲಿ ದಿ| ಬಿ.ಪಿ.ಕರ್ಕೇರರ ಹಿರಿಯ ಪುತ್ರ ಹಾಗೂ ‘ನಮ್ಮ ಕುಡ್ಲ’ ತುಳು ವಾರ್ತಾ ವಾಹಿನಿಯ ನಿರ್ದೇಶಕ ಹರೀಶ್ ಬಿ. ಕರ್ಕೆರ ಅವರನ್ನು ಗೌರವಿಸಲಾಯಿತು. ನಮ್ಮ ಕುಡ್ಲ ನಿರ್ದೇಶಕರಾದ ಮೋಹನ ಬಿ. ಕರ್ಕೆರ ಮತ್ತು ಲೀಲಾಕ್ಷ ಬಿ. ಕರ್ಕೇರ ಉಪಸ್ಥಿತರಿದ್ದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಫಲಕ ವಾಚಿಸಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ವಂದಿಸಿ, ಪ್ರಧಾನ ಕಾರ್ಯದರ್ಶಿ, ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ‘ಶ್ರೀಹರಿ ಚರಿತ್ರೆ’ ಏಕಾದಶ ಸರಣಿಯ ಮೂರನೇ ಕಾರ್ಯಕ್ರಮವಾಗಿ ಬಲಿಪ ಶಿವಶಂಕರ ಭಟ್ ಭಾಗವತಿಕೆಯಲ್ಲಿ ‘ಪ್ರಹ್ಲಾದ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಜರಗಿತು.