ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಂಶೋಧಕ ಮೈಸೂರಿನ ಡಾ. ಬಿ.ಎಸ್. ಪ್ರಣತಾರ್ತಿಹರನ್ ಇವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ಅಭಿಮಾನಿಗಳು ಮತ್ತು ಬಂಧುಗಳು 2001ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಕಾರ್ಯ ನಿರ್ವಹಿಸಿದ ಹಳಗನ್ನಡ ಸಾಹಿತ್ಯದ ಅಧ್ಯಯನ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಭಾಷಾ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಬೇಕೆಂಬುದು ದತ್ತಿಯ ಆಶಯವಾಗಿದೆ.
2025ನೆಯ ಸಾಲಿಗೆ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಡಾ. ಬಿ.ಎಸ್. ಪ್ರಣತಾರ್ತಿಹರನ್ ಬಾನುಲಿ ನಿಲಯದಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ ನಂತರ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ 25 ವರ್ಷ ಸೇವೆ ಸಲ್ಲಿಸಿದವರು. ಸಂಕೇತಿ ಸಮುದಾಯದ ಅಧ್ಯಯನಕ್ಕೆ ಪಿ.ಎಚ್.ಡಿ. ಪದವಿಯನ್ನು ಪಡೆದು, ಜೊತೆಗೆ ‘ಸಂಕೇತಿ’ ಸಮುದಾಯವನ್ನೇ ಕೇಂದ್ರವಾಗಿರಿಸಿದ ಕೃತಿಗಳನ್ನೂ ಇವರು ರಚಿಸಿದ್ದಾರೆ. ಅವರ ಸಂಶೋಧನೆ ಮತ್ತು ಸಂಪಾದನೆಯ ನಲವತ್ತು ಕೃತಿಗಳು ಹತ್ತು ಸಂಪುಟಗಳಲ್ಲಿ ಅಡಕಗೊಂಡಿದ್ದು, ಅಮೂಲ್ಯವಾದ ಹಸ್ತಪ್ರತಿಗಳನ್ನೂ ಸಂಗ್ರಹಿಸಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಟಿ.ವಿ. ಚಿತ್ಕಲಾ, ಎಲ್.ಎಸ್. ಶಿವಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ್ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಭಾಗವಹಿಸಿದ್ದರು. ಸಮಿತಿಯು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿಗೆ ಹಿರಿಯ ಸಂಶೋಧಕ ಡಾ. ಬಿ.ಎಸ್. ಪ್ರಣತಾರ್ತಿ ಹರನ್ ಇವರನ್ನು ವಿಶೇಷವಾಗಿ ಅಭಿನಂದಿಸಿ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.