ಡಾ. ಗುಂಡ್ಮಿ ಚಂದ್ರಶೇಖರ ಐತಾಳ್ ಇವರು ಕಳೆದ ಶತಮಾನದ ಒಬ್ಬ ಸಜ್ಜನ, ಸಹನೆಯೇ ಮೂರ್ತಿವೆತ್ತಂತಿರುವ ಮೌಲ್ಯಯುತ ಸಾಹಿತಿ. ಸರಳವಾದ ಜೀವನ ಶೈಲಿ, ಮಿತಭಾಷಿಯಾದ ಇವರನ್ನು ನೋಡುವಾಗ ಇವರೊಂದು ಜ್ಞಾನ ಭಂಡಾರ ಎಂಬುದು ಅರಿವಿಗೆ ಬರುವುದಿಲ್ಲ. ಆದರೆ ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು.
1936 ಜನವರಿ 20ರಂದು ಉಡುಪಿ ತಾಲೂಕಿನ ಗುಂಡ್ಮಿಯಲ್ಲಿ ಇವರ ಜನನವಾಯಿತು. ತಂದೆ ರಾಮಚಂದ್ರ ಮತ್ತು ತಾಯಿ ಸತ್ಯಮ್ಮ. ಎಳವೆಯಿಂದಲೇ ಓದು ಬರಹದಲ್ಲಿ ಬಹಳ ಆಸಕ್ತಿ ತೋರುತ್ತಿದ್ದ ಐತಾಳರ ಒಲವು ಸಾಹಿತ್ಯದ ಕಡೆಗೂ ಇತ್ತು. ತಾನೇ ಸ್ವತಃ ಸಣ್ಣಪುಟ್ಟ ಕವನಗಳನ್ನು ರಚಿಸಿ ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ಬಾಲ್ಯದ ಈ ಅಭ್ಯಾಸವೇ ಮುಂದೆ ಸತ್ವಯುತ ಬರಹಗಳಿಗೆ ನಾಂದಿಯಾಯಿತು.
ಡಾ. ಚಂದ್ರಶೇಖರ ಐತಾಳರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿಯನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದರು. ಇವರು ತಾನು ಹುಟ್ಟಿ ಬೆಳೆದ ಹಳ್ಳಿಯ ಸುತ್ತಮುತ್ತಲಿನ ಪರಿಸರದಲ್ಲಿ ತಿರುಗಾಡಿ ಜನಪದ ಹಾಡುಗಳ ಅಧ್ಯಯನ ಮಾಡಿ ನೂರಾರು ಹಾಡುಗಳನ್ನು ಸಂಗ್ರಹಿಸಿ ಎರಡು ಕೃತಿಗಳ ರೂಪದಲ್ಲಿ ಹೊರತಂದಿದ್ದಾರೆ. ಇವುಗಳೇ ‘ಕೈಲಿ ಕರೆದ ನೊರೆ ಹಾಲು’ , ‘ಮದ್ದುಂಟೆ ಜನನ ಮರಣಕ್ಕೆ’ ಮತ್ತು ‘ಚಿನ್ನದ ಕದರ್ಹಾಂಗೆ ಸಲಹಿನಿ’. ಇವು ಜನಪದ ಶೈಲಿಯಲ್ಲಿ ಅವರು ಸಂಪಾದಿಸಿದ ಪ್ರಮುಖ ಮೂರು ಕೃತಿಗಳು. ‘ಮದ್ದುಂಟೆ ಜನನ ಮರಣಕ್ಕೆ’ 400 ಪುಟಗಳದ್ದಾಗಿದ್ದು, ಐತಾಳರಿಗೆ ಪ್ರಸಿದ್ಧಿ ತಂದುಕೊಟ್ಟ ಕೃತಿಯಾಗಿದೆ. ‘ಗುಂಡುಸೂಜಿ’, ‘ಬೆಳಗಾಯಿತು’, ‘ಹೂವಿನ ಕೋಲು’, ‘ಪಟಾಚಾರ’ ಹಾಗೂ ‘ಸ್ತ್ರೀ’, ಇವು ಕವನ ಸಂಕಲನಗಳು. ‘ಸೀಯಾಳ’, ‘ಸಾವಿರಾರು ಗುಂಡುಸೂಜಿ’ ಮತ್ತು ‘ಬ್ರಾಹ್ಮಣ ಬಂಡಾಯ’ ಇತ್ಯಾದಿ 9 ಕವನ ಸಂಕಲನಗಳು ಇವರ ರಚನೆ. ‘ಮಾತೃ ಸಂಹಿತೆ’ ಗುಂಡ್ಮಿಯವರ ಕವಿತೆಗಳ ಸಂಕಲನ.
ತಾಯಿಯ ಬಗೆಗಿನ ಮಾತೃ ವಾತ್ಸಲ್ಯ ಮತ್ತು ಹೃದಯವನ್ನು ತಟ್ಟುವ ವಾತ್ಸಲ್ಯ ಪೂರ್ಣ ಭಾವಗಳು ಈ ಸಂಕಲನದಲ್ಲಿ ಪ್ರಕಟಗೊಂಡಿವೆ. ಇದು ‘ಹಿಮ್ ಟು ಮದರ್’ ಎಂಬ ಶೀರ್ಷಿಕೆಯಲ್ಲಿ ಆಂಗ್ಲ ಭಾಷೆಗೆ ಅನುವಾದಗೊಂಡಿದೆ. ಅಮೆರಿಕದ ವರ್ಲ್ಡ್ ಯುನಿವರ್ಸಿಟಿ ‘ಡಾಕ್ಟರ್ ಆಫ್ ಲಿಟರೇಚರ್’ ಪದವಿಯನ್ನು ಈ ಕೃತಿಗೆ ನೀಡಿ ಐತಾಳರನ್ನು ಗೌರವಿಸಿದೆ. ‘ಸಾಂತ್ಯಾರು ವೆಂಕಟರಾಜ’, ‘ಕನಕದಾಸರು’, ‘ವ್ಯಾಸರಾಯರು’, ‘ರುದ್ರಭಟ್ಟ’ ಮತ್ತು ಸನ್ಮಾರ್ಗಸಾಧಕ ಇವು 5 ವ್ಯಕ್ತಿ ಚಿತ್ರಣಗಳು. ‘ಸಮಾರಾಧನೆ’, ‘ಬೆಳಕಿನ ಬೀಜ’, ‘ಪಂಪನ ಪೆಂಪು’ ಇವು ಇವರ ವಿಮರ್ಶಾ ಗ್ರಂಥಗಳು. ‘ದುರ್ಗಸಿಂಹನ ಪಂಚತಂತ್ರ’ ಎಂಬುದು ಅನುವಾದಿತ ಕೃತಿ. ‘ಸೌಂದರ್ಯದ ಸಾನಿಧ್ಯದಲ್ಲಿ’ ಎಂಬ ಒಂದು ಐತಿಹಾಸಿಕ ಕೃತಿಯನ್ನು ಮತ್ತು ‘ಚೆಲುವು ಚೆಲ್ಲಿದಲ್ಲಿ’ ಎಂಬ ಪ್ರವಾಸ ಕಥನವನ್ನು ಬರೆದ ಖ್ಯಾತಿ ಇವರದು. ಹೀಗೆ ಒಟ್ಟು ಸೇರಿ 23 ಕೃತಿಗಳು ಪ್ರಕಟಗೊಂಡಿವೆ.
ಬಹಳ ಕ್ಲಿಷ್ಟವಲ್ಲದ ಸಾಮಾನ್ಯರೂ ಓದಿ ಅರ್ಥೈಸಿಕೊಳ್ಳಬಲ್ಲ ಬರಹ ಚಂದ್ರಶೇಖರ ಐತಾಳರದು. ಅವರ ಪ್ರೌಢ ಬರಹಗಳಲ್ಲಿ ಅವರ ಅಗಾಧ ಜ್ಞಾನದ ಆಳ ನಮಗರಿವಾಗುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ದೊರೆತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರ ಗೌರವವನ್ನು ಹೆಚ್ಚಿಸಿವೆ. ‘ಪಟಾಚಾರ’ ಕೃತಿಗೆ ಬಿ.ಎಂ.ಶ್ರೀ. ಸುವರ್ಣ ಪದಕ, ‘ಸೌಂದರ್ಯ ಸಾನಿಧ್ಯದಲ್ಲಿ’ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ‘ಕೈಲಿ ಕರೆದ ನೊರೆ ಹಾಲು’ ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಮದ್ದುಂಟೆ ಜನನ ಮರಣಕ್ಕೆ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸೀಯಾಳ’ ಕೃತಿಗೆ ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ ಇವೆಲ್ಲವೂ ಅವರ ಸಾಹಿತ್ಯ ಕೃಷಿಗೆ ಸಂದ ಗೌರವ.
ಡಾ. ಚಂದ್ರಶೇಖರ ಐತಾಳದ ಪತ್ನಿ ಶ್ರೀಮತಿ ಅನುಸೂಯ ಐತಾಳ್. “ಪ್ರೀತಿ ಮಮತೆಯನ್ನು ನೀಡಿದ ತಂದೆಯಾದರೂ ಅವರು ನನಗೆ ಒಬ್ಬ ಆತ್ಮೀಯ ಗೆಳೆಯ, ಒಬ್ಬ ಉತ್ತಮ ಮಾರ್ಗದರ್ಶಕ, ಅವರ ಮಗಳಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ.” ಈ ಮಾತುಗಳು ಡಾ. ಚಂದ್ರಶೇಖರ ಐತಾಳರ ಹಿರಿಯ ಮಗಳು ವೀಣಾ ತನೋಜ್ ತನ್ನ ತಂದೆಯ ಬಗ್ಗೆ ಪ್ರೀತಿ ಅಭಿಮಾನದಿಂದ ಹೇಳುವ ಮಾತುಗಳು. ಅಪಾರ ಸಾಹಿತ್ಯ ರಚನೆ ಮಾಡಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಶ್ರೀಯುತರು ಕೇವಲ 54 ವರ್ಷ ಮಾತ್ರ ಜೀವಿಸಿದ್ದು, ತಮ್ಮ ಸಾಹಿತ್ಯ ರಚನೆಯ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ 1990ರಲ್ಲಿ ದೇವರ ಪಾದವನ್ನು ಸೇರಿದರು.
ಈ ದಿವ್ಯ ಚೇತನಕ್ಕೆ ಅನಂತ ನಮನಗಳು.
– ಅಕ್ಷರೀ