ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಧಾರವಾಡ ಮತ್ತು ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಿತಿ ಇದರ ವತಿಯಿಂದ ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವ ಸಮಾರಂಭವನ್ನು ಧಾರವಾಡದ ಡಿ.ಸಿ. ಕಾಂಪೌಂಡ್, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಡಾ. ಎಚ್.ಎನ್. ರಾಘವೇಂದ್ರ ರಾವ್ ಇವರು ಉದ್ಘಾಟನೆ ಮಾಡಲಿದ್ದು, ಪ್ರೊ. ಮಲ್ಲಿಕಾರ್ಜುನ ಹಿರೇಮಠ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಡಾ. ರಮಾಕಾಂತ ಜೋಶಿ ಇವರು ‘ಒಳಗಿರುವ ಬೆಳಕು’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಿರುವರು. 11-00 ಗಂಟೆಗೆ ನಡೆಯಲಿರುವ ಗೋಷ್ಠಿ 1ರಲ್ಲಿ ಪ್ರಬಂಧ ಮಂಡನೆ ಮತ್ತು ಗೋಷ್ಠಿ 2ರಲ್ಲಿ ಸಂವಾದ (ಇಂಗ್ಲೀಷ್ ಮತ್ತು ಕನ್ನಡ ವಿಮರ್ಶೆ) ಹಾಗೂ ಮಧ್ಯಾಹ್ನ 1-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಡಾ. ಜಿ.ಎಸ್. ಆಮೂರ :
ಗದಗ, ಕುಮಟಾದ ಪದವಿ ಕಾಲೇಜುಗಳಲ್ಲಿ ಮತ್ತು ನಂತರ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ನಾಲ್ಕು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಡಾ. ಜಿ.ಎಸ್. ಆಮೂರ ಅವರು 1968ರಿಂದ 1985ರವರೆಗೆ ಔರಂಗಾಬಾದಿನ ಮರಾಠವಾಡಾ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ರೀಡರ್, ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ಅನೇಕ ಹುದ್ದೆಗಳು ಅವರನ್ನು ಅನುಸರಿಸಿಕೊಂಡು ಬಂದರೂ, ಅವನ್ನೆಲ್ಲ ನಿರಾಕರಿಸಿ, ತಮ್ಮ ಉಳಿದೆಲ್ಲ ಆಯುಷ್ಯವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿರಿಸಬೇಕೆನ್ನುವ ಸಂಕಲ್ಪದೊಂದಿಗೆ ಧಾರವಾಡಕ್ಕೆ ಮರಳಿದರು.
ಧಾರವಾಡಕ್ಕೆ ಮರಳಿದ ಹೊಸತರಲ್ಲಿಯೇ, ವಿದ್ಯಾರ್ಥಿದೆಸೆಯಲ್ಲಿ ಆಮೂರರ ಸ್ನೇಹಿತರೂ, ಇವರೊಂದಿಗೆ ಎಂ.ಎನ್. ರಾಯ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ‘ರಾಯಿಷ್ಟ್’ ಎನ್ನಿಸಿಕೊಂಡಿದ್ದ ಶ್ರೀ ಎಸ್.ಆರ್. ಬೊಮ್ಮಾಯಿಯವರು ಆಮೂರರ ಮನೆಗೆ ಭೆಟ್ಟಿ ನೀಡಿ, ಮೈಸೂರು ಅಥವಾ ಕಲಬುರಗಿ ವಿಶ್ವವಿದ್ಯಾಲಯಗಳಲ್ಲಿ ಒಂದರ ವೈಸ್ ಚಾನ್ಸಲರ್ ಹುದ್ದೆಯನ್ನು ಒಪ್ಪಿಕೊಳ್ಳಬೇಕೆಂದು ಹೇಳಿದರು. ಆದರೆ ಆಮೂರರು ತಮಗೆ ಯಾವ ಹುದ್ದೆಯೂ ಬೇಕಾಗಿಲ್ಲ ಎಂತಲೂ ಮತ್ತು ತಮ್ಮ ಇನ್ನುಳಿದ ಆಯುಷ್ಯವು ಕನ್ನಡ ಸಾಹಿತ್ಯದ ಓದು ಬರಹಗಳಿಗೆ ಮೀಸಲೆಂದು ಖಚಿತವಾಗಿ ಹೇಳಿ, ಬೊಮ್ಮಾಯಿಯವರ ಕೊಡುಗೆಯನ್ನು ನಯವಾಗಿ ನಿರಾಕರಿಸಿದರು.
1985ರವರೆಗೆ ಡಾ. ಜಿ.ಎಸ್. ಆಮೂರರು ತಮ್ಮ ಇಂಗ್ಲೀಷ್ ಅಧ್ಯಾಪನೆಯ ವೃತ್ತಿಗೆ ಅತ್ಯಂತ ನಿಷ್ಠವಾಗಿ ಬದ್ಧರಾಗಿದ್ದು, ಅವರು ತಮ್ಮ ಓದು ಮತ್ತು ಬರಹಗಳೆರಡನ್ನೂ ಇಂಗ್ಲೀಷಿಗೆ ಮುಡುಪಾಗಿಟ್ಟಿದ್ದರು. ಆ ಕಾಲದಲ್ಲಿ ಅವರು ಕನ್ನಡದಲ್ಲಿ ಬರೆದದ್ದು ಕ್ವಚಿತ್ತವೇ ! ಆದರೆ ನಿವೃತ್ತರಾಗಿ ಧಾರವಾಡಕ್ಕೆ ಮರಳಿದ ನಂತರ ಅವರು ಕೈಕೊಂಡದ್ದೆಲ್ಲ ಕನ್ನಡದ ಸಾಹಿತ್ಯ ಸಂಸ್ಕೃತಿಗಳ ಕೈಂಕರ್ಯವೇ ! ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ್, ಗಿರಡ್ಡಿ ಗೋವಿಂದರಾಜ, ಸಿ.ವಿ. ವೇಣುಗೋಪಾಲ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರೊಂದಿಗೆ ಸೇರಿ, ಹೊಸಗನ್ನಡ ಸಾಹಿತ್ಯ ವಿಮರ್ಶೆಗಳಿಗೆ ಹೊಸ ದಿಕ್ಕು-ದೆಸೆಗಳನ್ನು ನೀಡುವ ಬರಹಗಳನ್ನು ಸೃಷ್ಟಿಸುತ್ತ, ಕನ್ನಡ ಸಾಹಿತ್ಯ ವಿಮರ್ಶೆಯನ್ನು ಕುರಿತಂತೆ ಧಾರವಾಡಕ್ಕೆ ವಿಶೇಷ ಮಹತ್ವವನ್ನು ತಂದುಕೊಟ್ಟವರಲ್ಲಿ ಡಾ. ಜಿ.ಎಸ್. ಆಮೂರರ ಹೆಸರು ಪ್ರಮುಖವಾದದ್ದು.
ಕನ್ನಡ ವಿಮರ್ಶಾ ಪರಂಪರೆಯಲ್ಲಿ ‘ಧಾರವಾಡದ ವಿಮರ್ಶಾ ಪರಂಪರೆ’ ಎಂದು ಗುರುತಿಸುವಂತಹ ಮೌಲಿಕ ವಿಮರ್ಶಾ ಕೃತಿಗಳನ್ನು ರಚಿಸಿದವರಲ್ಲಿ ಆಮೂರರ ಹೆಸರು ಮುಂಚೂಣಿಯಲ್ಲಿರುತ್ತದೆ. ಆಮೂರರು, ಸೃಜನಶೀಲ ಕೃತಿಯು ಯಾವತ್ತಿಗೂ ಮುನ್ನೆಲೆಯಲ್ಲಿದ್ದು ವಿಮರ್ಶೆಯು ಅದನ್ನು ಅನುಸರಿಸಿಕೊಂಡು ಬರುತ್ತದೆನ್ನುವ, ವಿಮರ್ಶೆಯ ವಿನಯವನ್ನು ಹೊಂದಿದವರಾಗಿದ್ದರು. ಅವರು ತಮ್ಮ ವೈಯಕ್ತಿಕ ನಂಬಿಕೆ, ವೈಚಾರಿಕತೆಗಳಿಂದ ಸಾಹಿತ್ಯ ಕೃತಿಯ ವಿಮರ್ಶೆಯು ಪ್ರದೂಷಿತವಾಗದಂತೆ ಎಚ್ಚರ ವಹಿಸುತ್ತಿದ್ದರು. ಅವರು ತಮ್ಮ ವಿಮರ್ಶೆಗೆ ಖಚಿತ ತಾತ್ವಿಕತೆಯನ್ನು ರೂಪಿಸಿಕೊಂಡಿದ್ದರು ಮತ್ತು ಕೃತಿಯೊಂದರ ಮೌಲ್ಯವನ್ನು ಆ ನೆಲೆಯಲ್ಲಿ ನಿರೂಪಿಸುತ್ತಿದ್ದರು. ಆಮೂರರು ಕನ್ನಡ ಸಾಹಿತ್ಯದ ಬಗೆಗೆ ಅತ್ಯಂತ ವಿವೇಕಯುತವಾದ ಸಮ್ಯಕ್ ಗ್ರಹಿಕೆಯನ್ನು ಹೊಂದಿದ್ದು, ನಿರ್ಲಕ್ಷಕ್ಕೆ ಒಳಗಾದ ಅನೇಕ ಲೇಖಕರ ಮಹತ್ವವನ್ನು ಗುರುತಿಸಿ ಹೇಳಿದ್ದಾರೆ.
ಹೀಗೆ ತಮ್ಮ ವೈಯಕ್ತಿಕ ಸಾಧನೆಗಳ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಶ್ರೀಮಂತಗೊಳಿಸಿದ ಮತ್ತು ತಮ್ಮ ಅಂತಹ ಸಾಧನೆಗಳ ಮೂಲಕ ಧಾರವಾಡಕ್ಕೂ ವಿಶೇಷ ಮಹತ್ವವನ್ನು ತಂದುಕೊಟ್ಟ ಡಾ. ಜಿ.ಎಸ್. ಆಮೂರ ಅವರ ಜನ್ಮಶತಮಾನದ ವರ್ಷವಿದು. ಕರ್ನಾಟಕದಾದ್ಯಂತ ಈ ವರ್ಷದುದ್ದಕ್ಕೂ, ಡಾ. ಜಿ.ಎಸ್. ಆಮೂರನ್ನು ನೆನಪಿಸಿಕೊಳ್ಳುವ ಸಮಾರಂಭಗಳು ನಡೆಯಬೇಕಾಗಿದೆ. ಇಂಥ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು, ಡಾ. ಜಿ.ಎಸ್. ಆಮೂರರ ಮಕ್ಕಳು ಮತ್ತು ಆಮೂರರ ಅಭಿಮಾನಿಗಳೆಲ್ಲರೂ ಸೇರಿ ‘ಡಾ. ಜಿ.ಎಸ್. ಆಮೂರ ಶತಮಾನೋತ್ಸವ ಸಮಿತಿ’ಯನ್ನು ರಚಿಸಲಾಗಿದೆ.
ಅದರ ಆಶ್ರಯದಲ್ಲಿ ದಿನಾಂಕ 20 ಅಕ್ಟೋಬರ್ 2024ರ ರವಿವಾರ ಧಾರವಾಡದ ಆಲೂರ ಭವನದಲ್ಲಿ ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಮಾರಂಭಕ್ಕೆ ಕನ್ನಡ ಸಂಸ್ಕೃತಿ-ಸಾಹಿತ್ಯದ ಎಲ್ಲ ಅಭಿಮಾನಿಗಳನ್ನೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ಉದ್ಘಾಟನಾ ಸಮಾರಂಭದ ನಂತರ ಡಾ. ಜಿ.ಎಸ್. ಆಮೂರರನ್ನು ನೆನಪಿಸಿಕೊಳ್ಳುವ ಹಲವಾರು ಸಮಾರಂಭಗಳನ್ನು ಕರ್ನಾಟಕದ ಹತ್ತಾರು ಮುಖ್ಯ ಸ್ಥಳಗಳಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ. ಕರ್ನಾಟಕದ ವಿವಿಧ ಸ್ಥಳಗಳಲ್ಲಿರುವ ಸಾಂಸ್ಕೃತಿಕ ಸಂಘಟನೆಗಳು ಡಾ. ಜಿ.ಎಸ್. ಆಮೂರರ ಸ್ಮರಣೆಯ ಇಂಥ ಸಮಾರಂಭಗಳ ಆತಿಥ್ಯವನ್ನು ವಹಿಸಲು ಮುಂದೆ ಬರಬೇಕೆಂದು ‘ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಿತಿ’ಯು ವಿನಂತಿಸುತ್ತದೆ. ಹಾಗೆಯೇ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಇಂಥ ಸಮಾರಂಭಗಳನ್ನು ಸಂಘಟಿಸುವಲ್ಲಿ ವಿಶೇಷ ಗಮನ ಹರಿಸಬೇಕೆಂದು ವಿನಂತಿಸುತ್ತೇವೆ.
ಕನ್ನಡ ಪತ್ರಿಕೋದ್ಯಮವೂ ಡಾ. ಜಿ.ಎಸ್. ಆಮೂರರ ಸಾಹಿತ್ಯಕ ಮಹತ್ವವನ್ನು ಬಿಂಬಿಸುವ ಲೇಖನಗಳನ್ನು ಪ್ರಕಟಿಸಬೇಕೆಂದು ವಿನಂತಿಸುತ್ತೇವೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ಸೇವೆ ಸಲ್ಲಿಸಿದ ಯಾವುದೇ ಸಾಧಕರನ್ನು ಕನ್ನಡ ವಾಙ್ಮಯ ಲೋಕವು ಸ್ಮರಿಸದೇ ಇರುವುದಿಲ್ಲ ಎಂತೆನ್ನುವ ಲೋಕ ರೂಢಿಯ ಗ್ರಹಿಕೆ ಡಾ. ಜಿ.ಎಸ್. ಆಮೂರರನ್ನು ಕುರಿತಾಗಿಯೂ ನಿಜವಾಗಲಿ ಎಂತೆನ್ನುವ ವಿನಂತಿಯೊಂದಿಗೆ ಕನ್ನಡಿಗರೆಲ್ಲರನ್ನೂ ಡಾ. ಜಿ.ಎಸ್. ಆಮೂರರ ಜನ್ಮ ಶತಮಾನೋತ್ಸವದ ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇವೆ.