ಬೆಂಗಳೂರು: ದಿನಾಂಕ 23-06-2023 ರಂದು 80 ವಸಂತಗಳನ್ನು ಕಂಡ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ಕನ್ನಡ ಕಾವ್ಯಕ್ಕೆ ಹೊಸ ನೆಲೆಯನ್ನು ನೀಡಿದವರು. ತಮ್ಮ ಎಲ್ಲಾ ಅನುಭವಗಳನ್ನು ಸೂಕ್ಷ್ಮಗಳನ್ನು ಕವಿತೆಯ ಮೂಲಕವೇ ಹೇಳಿಕೊಂಡು ಬಂದಿರುವವರು. ಹಾಗಾಗಿ ʻಇದನ್ನು ನಿಲ್ಲಿಸಿದರೆ ನನ್ನ ಮಾತೂ ನಿಂತು ಹೋದಂತೆʼ ಎನ್ನುತ್ತಲೇ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಎಚ್.ಎಸ್.ವಿ. ಅವರಿಗೆ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅವರ ಸ್ವಗೃಹದಲ್ಲಿ ಅಭಿನಂದಿಸಿ ಶುಭ ಹಾರೈಸಿದರು.
ಎಚ್.ಎಸ್.ವಿಯವರ ಬದುಕಿನ ಯಾನದತ್ತ ಒಮ್ಮೆ ಕಣ್ಣು ಹಾಯಿಸಿದರೆ ಅವರದ್ದು ಪ್ರತಿ ಹಂತವೂ ಹೋರಾಟವೇ. ಸ್ವಯಂ ಪರಿಶ್ರಮದಿಂದ ಎತ್ತರಕ್ಕೆ ಏರಿ, ಇನ್ನೇನು ಬದುಕು ಸಹನೀಯ ಎನ್ನುವಾಗ ಮಡದಿಯ ಅಗಲುವಿಕೆ, ಮಗನ ಅನಾರೋಗ್ಯ ಹೀಗೆ ಶೋಕದ ಸೆಲೆಗಳು ಅವರನ್ನು ಬೆನ್ನಟ್ಟಿದ್ದವು. ಅದನ್ನು ಸಹನೀಯವಾಗಿಸಿ ಬದುಕಿನ ‘ಸ್ಥಿತಿ’ಯನ್ನಾಗಿಸುವುದು ಎಚ್.ಎಸ್.ವಿ ಕಾವ್ಯದಲ್ಲಿ ಹೆಚ್ಚು ಎದ್ದು ಕಾಣುತ್ತದೆ. ‘ಚಿನ್ನಾರಿ ಮುತ್ತ’ದ ಮೂಲಕ ಮಕ್ಕಳ ಮುಗ್ಧ ಲೋಕವನ್ನು ಹಿಡಿದ ಎಚ್.ಎಸ್.ವಿ ‘ಚಿತ್ರಪಟ’ದಲ್ಲಿ ಜಾನಕಿಯ ನೋವನ್ನು ಹಿಡಿಯ ಬಲ್ಲರು. ‘ಮಲ್ಲಾಡಿ ಹಳ್ಳಿಯಲ್ಲಿ ಮಳೆಗಾಲ’ದಂತಹ ತಮ್ಮದೇ ಬಹು ಗಂಭೀರ ಕವಿತೆಯನ್ನು ‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ ‘ಬಾನಲ್ಲಿ ಓಡೋ ಮೇಘ’ದಂತಹ ಜನಪ್ರಿಯ ಚಿತ್ರಗೀತೆಯನ್ನಾಗಿಸಿದ್ದು ಎಚ್.ಎಸ್.ವಿಯಂತಹವರಿಗೆ ಮಾತ್ರ ಸಲ್ಲುವ ಸಿದ್ಧಿ. ಎಚ್.ಎಸ್. ವೆಂಕಟೇಶಮೂರ್ತಿಯವರದ್ದು ಸದಾ ಮಾನವೀಯತೆಗೆ ತುಡಿಯುವ ಮನಸ್ಸು. ದೇವ, ರಾಕ್ಷಸ, ಮಾನವ ಮಾತ್ರವಲ್ಲದೆ ಪ್ರಾಣಿ-ಪಕ್ಷಿ ಅಷ್ಟೇ ಏಕೆ ಸ್ಥಾವರದಲ್ಲಿ ಕೂಡ ಅವರು ಹುಡುಕುವುದು ಮಾನವೀಯ ತುಡಿತವನ್ನು. ಮಹತ್ವದ ಸಂಗತಿ ಎಂದರೆ ಸ್ತ್ರೀ ಪಾತ್ರಗಳಿಗೆ ಎಚ್.ಎಸ್.ವಿಯವರ ಕವಿತೆಗಳಲ್ಲಿ ವಿಶೇಷ ಮಹತ್ವವಿದೆ. ಕಂಚಿನ ತೇರಿನ ರಾಜಕುಮಾರಿ, ಸೌಗಂಧಿಕಾ ದ ದ್ರೌಪದಿ, ರಾಗ-ವಿರಾಗದ ಅಮೃತಮತಿ, ಶುಕ್ಲ ಪಕ್ಷದ ಅಹಲ್ಯ, ಹರಿಗೋಲಿನ ತಾಯಿ, ವಿಮುಕ್ತಿಯ ವಿನುತೆ ಹೀಗೆ ಸ್ತ್ರೀಯರ ಕುರಿತು ಅನೇಕ ಲೇಖನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಎಚ್.ಎಸ್.ವಿಯವರು ಕಾವ್ಯ ಮಾತ್ರವಲ್ಲದೆ ಗದ್ಯ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಿನಿಮಾ, ನಾಟಕ ಕೊನೆಗೆ ಆತ್ಮ ಚರಿತ್ರೆ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ತಮ್ಮ ಅನನ್ಯ ಪ್ರತಿಭೆಯಿಂದ ಬೆಳಗಿದ ಬರವಣಿಗೆ ಅವರದು. ಇದಕ್ಕೆ ಉದಾತ್ತತೆ ಇದ್ದರೂ ನೀತಿ ಸಂಹಿತೆಯಲ್ಲಿ ಸಿಕ್ಕಿ ಬಿದ್ದಂತಹುದಲ್ಲ. ಇಂತಹ ಕಾವ್ಯ ರೂಪಿಸುವ ಅನುಸಂಧಾನ ದೊಡ್ಡದು. ಬದುಕಿನ ಬಗ್ಗೆ ಇಟ್ಟಿರುವ ವಿಶ್ವಾಸ ಇನ್ನೂ ದೊಡ್ಡದು. ಇಂತಹ ಮಹತ್ವದ ಕಾವ್ಯವನ್ನು ನೀಡಿದ ಕವಿ ಶತಾಯಿಷಿಯಾಗಲಿ, ಆ ಸಂಭ್ರಮದಲ್ಲಿ ಭಾಗಿಯಾಗುವ ಅದೃಷ್ಟ ನಮ್ಮದಾಗಲಿ ಎನ್ನುವುದೇ ನನ್ನ ಆಶಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಶುಭ ಕೋರಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.