ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು ಡಾ. ಕೆ. ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಯನ್ನು ಗುರುತಿಸಿ 2023ನೇ ಸಾಲಿನ ಡಾ. ಜೀ.ಶಂ.ಪ. ತಜ್ಞ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಬೀದರ್‌ನಲ್ಲಿ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿನ್ನಪ್ಪ ಗೌಡರಿಗೆ ಭಾಗವಹಿಸಲು ಅಸಾಧ್ಯವಾಗಿದ್ದ ಕಾರಣ ಅವರನ್ನು ಬೆಂಗಳೂರಿನ ಅಕಾಡೆಮಿಯ ಕಚೇರಿಯಲ್ಲಿ ದಿನಾಂಕ 03 ಏಪ್ರಿಲ್ 2025ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಬಳಿಕ ಮಾತನಾಡಿದ ಅವರು, “ಭೂತಾರಾಧನೆಯಂತಹ ಜನಪದ ಧಾರ್ಮಿಕ ರಂಗಭೂಮಿಯನ್ನು ಮೊದಲ ಬಾರಿಗೆ ಸಮಗ್ರ ಅಧ್ಯಯನ ನಡೆಸಿದ ಚಿನ್ನಪ್ಪ ಗೌಡರು ಭೂತಾರಾಧನೆಯ ಪ್ರಭೇದವಾದ ಜಾಲಾಟವನ್ನು ಬೆಳಕಿಗೆ ತಂದು ಅದರ ವೈಶಿಷ್ಟ್ಯಗಳನ್ನು ತಿಳಿಸಿದವರು. ಅವರ ಅಧ್ಯಯನ ಒಂದು ಮಾದರಿ ಅಧ್ಯಯನ. ತುಳು ಜಾನಪದದ ಪ್ರಮುಖ ಪ್ರಕಾರಗಳ ಕುರಿತಂತೆ ಅಧ್ಯಯನ ನಡೆಸಿರುವ ಡಾ. ಗೌಡರು ಪಾಡ್ಡನಗಳು, ಸಿರಿ ಸಂಧಿ, ಕಬಿತೆಗಳು ಮತ್ತು ಅಜ್ಜಿಕತೆಗಳಿಗೆ ಹೊಸ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಸಂಶೋಧನೆ, ಅಂತಾರಾಷ್ಟ್ರೀಯ ಯೋಜನೆ ಮತ್ತು ಅನುವಾದಗಳ ಮೂಲಕ ಕರ್ನಾಟಕ ಜಾನಪದಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟರು. ಗೌಡರು ಇತ್ತೀಚಿಗೆ ಪ್ರಕಟಿಸಿದ ‘ಕರಾವಳಿ ಕಥನಗಳು’ ಮತ್ತು ಮಹತ್ವದ ಪ್ರಸ್ತಾವನೆಯುಳ್ಳ ಮಾಚಾರು ಗೋಪಾಲ ನಾಯ್ಕರ ‘ಸಿರಿ ಸಂಧಿ’ ಇವು ರಾಷ್ಟ್ರೀಯ ಮನ್ನಣೆಗೆ ಅರ್ಹವಾದ ಕೃತಿಗಳು” ಎಂದರು. ‘ಭೂತಾರಾಧನೆ-ಜಾನಪದೀಯ ಅಧ್ಯಯನ’ ಕೃತಿಯ ವಿಸ್ತ್ರತ ಆವೃತ್ತಿ ಮರುಮುದ್ರಣಗೊಳ್ಳುತ್ತಿರುವುದಕ್ಕೆ ಶುಭಾಶಯಗಳನ್ನು ಸಲ್ಲಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಕೆ. ಚಿನ್ನಪ್ಪ ಗೌಡ, “ಇದು ಜಾನಪದ ಭೀಷ್ಮ ಡಾ. ಜೀ. ಶಂ. ಪರಮಶಿವಯ್ಯ ಹೆಸರಿನಲ್ಲಿರುವ ಪ್ರಶಸ್ತಿಯಾದುದರಿಂದ ವಿಶೇಷ ಮನ್ನಣೆ, ಗೌರವ. ಜೀಶಂಪ ನನ್ನಂತಹ ಎರಡನೆಯ ಘಟ್ಟದ ಜಾನಪದ ಸಂಗ್ರಹ ಮತ್ತು ಅಧ್ಯಯನಕಾರರಿಗೆ ಪ್ರಾತಸ್ಮರಣೀಯರು. ಅವರ ಆದರ್ಶ, ಪರಿಶ್ರಮ, ಜಾನಪದ ಪ್ರೀತಿಯನ್ನು ಇಟ್ಟುಕೊಂಡು ಕೆಲಸ ಮಾಡಿದವನು ನಾನು. ಅಮೃತ ಸೋಮೇಶ್ವರ, ಬಿ.ಎ. ವಿವೇಕ ರೈ ಇವರ ಮಾರ್ಗದರ್ಶನ, ಕು.ಶಿ. ಹರಿದಾಸ ಭಟ್ಟರ ಪ್ರೋತ್ಸಾಹ ಮತ್ತು ಫಿನ್ಲೆಂಡ್ ವಿದ್ವಾಂಸ ಲೌರಿ ಹೊಂಕೊರವರ ಜಾನಪದ ವಿದ್ವತ್ತು ಇವೆಲ್ಲ ನನ್ನನ್ನು ಬೆಳೆಸಿವೆ” ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ರಿಜಿಸ್ಟ್ರಾರ್ ಎನ್. ನಮ್ರತಾ, ಅಕಾಡೆಮಿ ಸದಸ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಭಾಗವಹಿಸಿದ್ದರು.