24 ಫೆಬ್ರವರಿ 2023, ಮುಂಬೈ: ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ ಶಾಸ್ತ್ರೀಯ ನೃತ್ಯದ ಖ್ಯಾತ ನೃತ್ಯಗಾತಿ ಪದ್ಮಭೂಷಣ ಪುರಸ್ಕೃತೆ ಡಾ. ಕನಕ್ ರೆಲೆ ಅವರು 22 ಫೆಬ್ರವರಿ 2023 ರಂದು ತಮ್ಮ 85ನೇ ವಯಸ್ಸಿನಲ್ಲಿ ಬುಧವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ . ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರಚಾರ ಮತ್ತು ಸಂಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ನೂರಾರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ, ನೃತ್ಯ ಪ್ರಕಾರವನ್ನು ಉಳಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟವರು. ಡಾ. ರೆಲೆಯವರು ಗುಜರಾಥ್ ನಲ್ಲಿ11 ಜೂನ್ 1937 ರಲ್ಲಿ ಜನಿಸಿದರು. ತನ್ನ ಚಿಕ್ಕಪ್ಪನೊಂದಿಗೆ ಕೊಲ್ಕೊತ್ತಾದಲ್ಲಿರುವಾಗ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಪ್ರದರ್ಶನಗಳನ್ನು ವೀಕ್ಷಿಸುವ ಅವಕಾಶ ಒದಗಿದ್ದು ಅದು ಕಲಾತ್ಮಕ ಸಂವೇದನೆಗಳನ್ನು ರೂಪಿಸಿಕೊಳ್ಳಲು ತನಗೆ ಸಹಾಯ ಮಾಡಿದೆ ಎಂದು ಅವರೇ ಹೇಳುತ್ತಾರೆ. ಕಥಕ್ಕಳಿ ಕಲಾವಿದೆಯಾದ ಡಾ.ರೆಲೆ ಗುರು ಪಾಂಚಾಲಿ ಕರುಣಾಕರ ಪಣಿಕ್ಕರ್ ಇವರಲ್ಲಿ ತನ್ನ 7ನೇ ವರ್ಷದ ಎಳವೆಯಲ್ಲಿಯೇ ಕಥಕ್ಕಳಿ ತರಬೇತಿಯನ್ನು ಮತ್ತು ಕಲಾಮಂಡಲ ರಾಜಲಕ್ಷ್ಮಿ ಅವರಿಂದ ಮೋಹಿನಿಯಾಟ್ಟಂಗೆ ದೀಕ್ಷೆಯನ್ನು ಪಡೆದರು. ಸಂಗೀತ ನಾಟಕ ಅಕಾಡಮಿ ಮತ್ತು ಫೋರ್ಡ್ ಫೌಂಡೇಶನ್ ನೀಡಿದ ಅನುದಾನವು ಮೋಹಿನಿಯಾಟ್ಟಂನಲ್ಲಿ ಆಳವಾಗಿ ಅಧ್ಯಯನ ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಕೇರಳಕ್ಕೆ ಹೋಗಿ ಚುಂಚು ಕುಟ್ಟಿ ಅಮ್ಮ, ಚಿನ್ನಮ್ಮ ಅಮ್ಮ ಮತ್ತು ಕಲ್ಯಾಣಿ ಕುಟ್ಟಿ ಅಮ್ಮ ಅವರಿಂದ ಮೋಹಿನಿಯಾಟ್ಟಂನ ಸೂಕ್ಷ್ಮ ವ್ಯತ್ಯಾಸಗಳೊಂದಿಗೆ ಸಾಂಪ್ರದಾಯಿಕ ಮತ್ತು ತಾಂತ್ರಿಕ ಶೈಲಿಗಳನ್ನು ತಿಳಿದರು. ಈ ಕಲಾವಿದರ ಕುರಿತಾದ ಅಧ್ಯಯನ ಮತ್ತು ಬಲರಾಮ ಭಾರತಂ ಅವರ ಶಾಸ್ತ್ರೀಯ ಪಠ್ಯಗಳ ಹಿನ್ನಲೆಯಲ್ಲಿ ಮೋಹಿನಿಯಾಟ್ಟಂನ್ನು ತನ್ನದೇ ಆದ ಶೈಲಿಯಲ್ಲಿ ಅಭಿವೃದ್ಧಿಗೊಳಿಸಿದರು. ಮೋಹಿನಿಯಾಟ್ಟಂನ್ನು ಜನಪ್ರಿಯಗೊಳಿಸಿದ ಮತ್ತು ವೈಜ್ಞಾನಿಕ ಮನೋಭಾವ ತಂದ ಖ್ಯಾತಿ ಡಾ.ರೆಲೆ ಅವರಿಗೆ ಸಲ್ಲುತ್ತದೆ. ತನ್ನ ಅಭಿನಯದಲ್ಲಿ ಮಹಿಳಾ ಪಾತ್ರಗಳ ನೈಜ ಚಿತ್ರಣಕ್ಕಾಗಿ ಡಾ.ರೆಲೆ ಹೆಸರು ವಾಸಿಯಾಗಿದ್ದಾರೆ.ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಮತ್ತು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಕಾನೂನಿನಲ್ಲಿ ಡಿಪ್ಲೊಮಾ ಪಡೆದ ಇವರು ಯೋಗ್ಯ ವಕೀಲರಾಗಿದ್ದುಕೊಂಡು ಮುಂಬೈ ವಿಶ್ವ ವಿದ್ಯಾನಿಲಯದಿಂದ ನೃತ್ಯದಲ್ಲಿ ಪಿ.ಎಚ್.ಡಿ. ಪಡೆದಿರುವುದು ಉಲ್ಲೇಖನೀಯ. ವಿಶ್ವ ವಿದ್ಯಾನಿಲಯದಲ್ಲಿ ಲಲಿತಾ ಕಲಾ ವಿಭಾಗವನ್ನು ಪ್ರಾರಂಭಿಸುವಲ್ಲಿ ಡಾ.ರೆಲೆಯದು ಮುಖ್ಯ ಪಾತ್ರ. 1966ರಲ್ಲಿ ನಳಂದ ನೃತ್ಯ ಸಂಶೋಧನಾ ಕೇಂದ್ರ ಮತ್ತು 1972ರಲ್ಲಿ ನಳಂದ ನೃತ್ಯ ಮಹಾವಿದ್ಯಾಲಯವನ್ನು ಸ್ಥಾಪಿಸಿದ ಖ್ಯಾತಿ ಇವರದ್ದು. ಮುಂಬೈನ ನಳಂದ ನೃತ್ಯ ಸಂಶೋಧನಾ ಕೇಂದ್ರವು ವಿಶ್ವ ವಿದ್ಯಾನಿಲಯದ ಪದವಿಗಾಗಿ ವಿದ್ಯಾರ್ಥಿಗಳಿಗೆ ಮೋಹಿನಿ ಯಾಟ್ಟಂ ತರಬೇತಿ ನೀಡುತ್ತದೆ.
ನೃತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳು ಅಪಾರ. ಗುಜರಾತ ಸರ್ಕಾರದಿಂದ ಗೌರವ ಪುರಸ್ಕಾರ, ಭಾರತದ ಗಣರಾಜ್ಯದಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಪದ್ಮಶ್ರೀ” ಪ್ರಶಸ್ತಿ, ಭಾರತೀಯ ಸಂಗೀತ ಮತ್ತು ನೃತ್ಯದ ಪ್ರವರ್ತಕ ಸಂಸ್ಥೆಯಾದ ವಿಪಂಚಿ ಇವರಿಂದ “ಕಲಾವಿಪಂಚಿ” ಬಿರುದು , ಮಧ್ಯ ಪ್ರದೇಶ ಸರ್ಕಾರವು “ಕಾಳಿದಾಸ್ ಸನ್ಮಾನ್”, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ, ಭಾರತ ಸರ್ಕಾರದ “ಪದ್ಮಭೂಷಣ” ಪ್ರಶಸ್ತಿ ಇತ್ಯಾದಿ ಅವರ ಕಲಾಪ್ರತಿಭೆಗೆ ಸಂದ ಗೌರವಗಳು. ಡಾ. ಕನಕ್ ರೆಲೆ ನೃತ್ಯಕ್ಕೆ ಸಂಬಂಧ ಪಟ್ಟ ಪುಸ್ತಕಗಳನ್ನೂ ಬರೆದಿದ್ದಾರೆ.