ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ ಹಾಗೂ ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ಉಡುಪಿ ಡಾ. ಉಪ್ಪಂಗಳ ರಾಮಭಟ್ಟ ಮತ್ತು ಶ್ರೀಮತಿ ಶಂಕರಿ ಆರ್. ಭಟ್ಟರ ಅಕಲಂಕ ದತ್ತಿ ಕಾರ್ಯಕ್ರಮ ‘ಅಕಲಂಕ ದತ್ತಿ ಪುರಸ್ಕಾರ 2022’ ಕಾರ್ಯಕ್ರಮವು ದಿನಾಂಕ :02-07-2023ರಂದು ಭಾನುವಾರ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಅಕಲಂಕ ದತ್ತಿ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪದ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ ಇವರು ವಹಿಸಲಿದ್ದು, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಇವರು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿಯವರು ಆಶಯ ಭಾಷಣ ಮಾಡಲಿದ್ದು, ಬೆಂಗಳೂರು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಎಮ್.ಎಲ್. ಸಾಮಗರವರು ಡಾ.ಕೆ.ಎಸ್. ಪವಿತ್ರ ಇವರಿಗೆ ‘ಅಕಲಂಕ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಉಡುಪಿಯ ದತ್ತಿ ದಾನಿಗಳಾದ ಶ್ರೀಮತಿ ಶಂಕರಿ ಉಪ್ಪಂಗಳ ರಾಮ ಭಟ್ ಮತ್ತು ಶ್ರೀ ರಾಜೇಶ್ ಯು. ಭಾಗವಹಿಸಲಿದ್ದಾರೆ.
ಉಡುಪಿ ತಾಲೂಕಿನ ಕಸಾಪದ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್.ಪಿ., ಬ್ರಹ್ಮಾವರ ತಾಲೂಕಿನ ಕಸಾಪದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ, ಕಾರ್ಕಳ ತಾಲೂಕಿನ ಕಸಾಪದ ಅಧ್ಯಕ್ಷರಾದ ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಾಪು ತಾಲೂಕಿನ ಕಸಾಪದ ಅಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆ, ಕುಂದಾಪುರ ತಾಲೂಕಿನ ಕಸಾಪದ ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್, ಹೆಬ್ರಿ ತಾಲೂಕಿನ ಕಸಾಪದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಭಂಡಾರಿ ಹಾಗೂ ಬೈಂದೂರು ತಾಲೂಕಿನ ಕಸಾಪದ ಅಧ್ಯಕ್ಷರಾದ ಡಾ. ರಘು ನಾಯಕ್ ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ನಡೆಯಲಿದೆ. ಕೊನೆಯಲ್ಲಿ ಹೆಗ್ಗೋಡಿನ ಸತ್ಯ ಸಂಶೋಧನ ರಂಗ ಸಮುದಾಯ ಅರ್ಪಿಸುವ ಡಾ. ಎಂ. ಗಣೇಶ ಹೆಗ್ಗೋಡು ನಿರ್ದೇಶನದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲ ..? ನಾಟಕ ಪ್ರದರ್ಶನವಿದೆ.
ಡಾ. ಕೆ.ಎಸ್. ಪವಿತ್ರ
ಪರಿಶ್ರಮ-ಪ್ರತಿಭೆಗಳೆರಡರ ವಿಸ್ಮಯಕರ ವ್ಯಕ್ತಿತ್ವದ ಡಾ. ಕೆ.ಎಸ್. ಪವಿತ್ರ ವಿಜ್ಞಾನ-ಕಲೆಗಳಲ್ಲಿ ಸಮಾನ ಎನ್ನುವ ಸಾಧನೆಗೈದಿರುವವರು. ಪಿಯುಸಿ ವಿಜ್ಞಾನದಲ್ಲಿ ಶೇ.98 ಅಂಕಗಳೊಂದಿಗೆ, 17ರ ಎಳೆ ವಯಸ್ಸಿನಲ್ಲಿ ವಿದ್ವತ್ ಭರತನಾಟ್ಯದಲ್ಲಿ ರಾಜ್ಯಕ್ಕೆ 2ನೇ ರ್ಯಾಂ ಕ್ ನೊಂದಿಗೆ ತೇರ್ಗಡೆ ಹೊಂದಿದ ಆಗಾಧ ಪ್ರತಿಭೆ ಅವರದ್ದು. ರಾಜ್ಯದ ಅತ್ಯಂತ ಹಳೆಯ, ಪ್ರತಿಷ್ಠಿತ ಸಂಸ್ಥೆಯಾದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ, ಅಂತರರಾಷ್ಟ್ರೀಯ ಖ್ಯಾತಿಯ ನಿಮ್ಹಾನ್ಸ್ ನಿಂದ ಎಂ.ಡಿ. ಮನೋವೈದ್ಯಕೀಯ ಪದವಿ, ಮನೋವೈದ್ಯಕೀಯ ಕ್ಷೇತ್ರದಲ್ಲಿ ಹತ್ತು ಹಲವು ಪದವಿ ಪುರಸ್ಕಾರ, ಫೆಲೋಷಿಪ್ ಗಳು ಇವರ ಬೌದ್ಧಿಕ ಸಾಮರ್ಥ್ಯದ ನಿದರ್ಶನಗಳು, ಖ್ಯಾತ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ಬಳಿ 20 ವರ್ಷಗಳ ದೀರ್ಘ ಅಧ್ಯಯನ, ನಂತರ ನೃತ್ಯ ಕ್ಷೇತ್ರದಲ್ಲಿ ಕಲಾವಿದೆ, ನೃತ್ಯ ಸಂಯೋಜಕಿ, ಗುರು ಆಯೋಜಕಿ, ಸಂಶೋಧಕಿ ಹೀಗೆ ಹಲವು ಪಾತ್ರಗಳಲ್ಲಿ ಡಾ. ಪವಿತ್ರ ತನ್ನ ಸಾಮರ್ಥ್ಯವನ್ನು ವಿಸ್ತರಿಸಿದವರು. ಶ್ರೀ ವಿಜಯ ಕಲಾನಿಕೇತನ ಅವರು ಸ್ಥಾಪಿಸಿ, ಬೆಳೆಸಿದ ಸಂಸ್ಥೆ. ಅದರ ಕಾರ್ಯಗಳ ಮೂಲಕ ಡಾ. ಪವಿತ್ರ ತನ್ನೆರಡು ವೃತ್ತಿಗಳಾದ ಮನೋವೈದ್ಯಕೀಯ ನೃತ್ಯಗಳನ್ನು ಬೆಸೆದರು.
ಮನೋವೈದ್ಯಕೀಯ ನೃತ್ಯ ಕ್ಷೇತ್ರಗಳ ಬಗೆಗೆ ಅರಿವನ್ನು ಪಸರಿಸುವ ಸಲುವಾಗಿ ಡಾ. ಪವಿತ್ರಾ ಸಾಹಿತ್ಯ ಕ್ಷೇತ್ರವನ್ನೂ ಪ್ರವೇಶಿಸಿದರು. ಸಾಹಿತ್ಯ ಪ್ರೀತಿ ಬಾಲ್ಯದಿಂದ ಇದ್ದರೂ, ಅದರ ಗಂಭೀರ ಕೃಷಿ ಮಾಡುವ ಸಲುವಾಗಿ ಪವಿತ್ರ ಎಂ.ಎ. (ಕನ್ನಡ ಸಾಹಿತ್ಯ), ಎಂ.ಎ. (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ)ಗಳನ್ನು ಅಭ್ಯಸಿಸಿದರು. ಎರಡರಲ್ಲೂ ಪ್ರಥಮ ರ್ಯಾಂ ಕ್ , ಬಂಗಾರದ ಪದಕ ಗಳಿಸಿದರು. ಪ್ರಸ್ತುತ ತಾವು ಪ್ರತಿನಿತ್ಯ ನೋಡುವ ರೋಗಿಗಳು, ಈವರೆಗೆ ಬರೆದಿರುವ 56 ಮಸ್ತಕಗಳು ಮತ್ತು ನಿರಂತರ ಕಾರ್ಯಕ್ರಮ, ತರಬೇತಿ, ಪ್ರಾತ್ಯಕ್ಷಿಕೆ, ಸಂಶೋಧನೆಗಳಿಂದ ಅವರು ಮನೋವೈದ್ಯಕೀಯ, ನೃತ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಶ್ರೇಷ್ಠ ವೈದ್ಯ ಸಾಹಿತಿ ರಾಜ್ಯ ಪ್ರಶಸ್ತಿ, ಕಲಾ ಸಂದೇಶ ಪ್ರಶಸ್ತಿ, ಮಕ್ಕಳ ಕಲ್ಯಾಣಕ್ಕಾಗಿ ಅವರು ಸಲ್ಲಿಸಿದ ಸೇವೆಗಾಗಿ ರಾಜ್ಯ ಪ್ರಶಸ್ತಿ, ಡಾ. ಎಂ. ವೈದ್ಯಲಿಂಗಂ ಉಪನ್ಯಾಸ ಗೌರವ, ಯುನಿಸೆಫ್ ಮೀಡಿಯಾ ಪ್ರಶಸ್ತಿ ಇವೇ ಮೊದಲಾದ ಹಲವು ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿವೆ. ಕನ್ನಡ ಕಾವ್ಯಗಳನ್ನು ಆಧರಿಸಿದ ಅವರ ನೃತ್ಯ ಪ್ರಾತ್ಯಕ್ಷಿಕೆಗಳು ನಾಡಿನ ಎಲ್ಲೆಡೆ ಪ್ರದರ್ಶನಗೊಂಡಿವೆ.
ಡಾ. ಉಪ್ಪಂಗಳ ರಾಮಭಟ್, ಹಿರಿಯ ಸಾಹಿತಿಗಳು
ಹಿರಿಯ ಸಾಹಿತಿ ಡಾ. ಉಪ್ಪಂಗಳ ರಾಮ ಭಟ್‌ರ ಕನ್ನಡ ಸೇವೆ ಅನನ್ಯವಾದುದು. ದಿ. ಪರಮೇಶ್ವರ ಭಟ್ ಹಾಗೂ ದಿ. ಲಕ್ಷ್ಮೀ ದಂಪತಿಯ ಪುತ್ರರಾಗಿರುವ ಡಾ. ರಾಮ ಭಟ್ ಅವರು 1981ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಸಂಶೋಧನಾ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾಗಿ ಹಾಗೂ ಕಲ್ಲಿಕೋಟೆ ವಿಶ್ವವಿದ್ಯಾನಿಲಯ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು ಮತ್ತು ಇತರೇ ಶಿಕ್ಷಣ ಸಂಸ್ಥೆಗಳಲ್ಲಿ 37 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಂಶೋಧಕರಾಗಿ, ಸಂಶೋಧನಾ ಮಾರ್ಗದರ್ಶಿಯಾಗಿ, ಕವಿಯಾಗಿ, ವಿಮರ್ಶಕರಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ವಿಶಿಷ್ಟವಾದುದು.
ಡಾ. ಉಪ್ಪಂಗಳ ಅವರಿಂದ ಹೊರಬಂದ ಕೃತಿಗಳು ಹಲವಾರು. ಪಂಚವಟಿ, ಅಂತರಂಗ, ಮಾನಸ, ಗಡಿನಾಡು-ಕಾಸರಗೋಡು, ಕರ್ನಾಟಕ ಶಬ್ಧಾನುಶಾಸನ ವಿವೇಚನೆ, ಸಂಚಾರ ಸಂಪುಟ, ಅತಿಥಿ ಉಪಹರಣ, ಪರಮ (ಹೆತ್ತವರ ಸ್ಮರಣೆ), ಕನ್ನಡ ನುಡಿನಡೆ, ಜನಪದ ನುಡಿ ‘ಹವಿಕ’ – ಈ ಮೊದಲಾದ ಮೌಖಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿದೆ.
“ವೈಯಾಕರಣ ಭಟ್ಟಾಕಲಂಕ’ (ಕವಿ ಪರಿಚಯ) ಕೃತಿಗೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಪುರಸ್ಕಾರ, ‘ಕವಿಮಾರ್ಗ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಹಾ.ಮಾ.ನಾ. ದತ್ತಿ ಪ್ರಶಸ್ತಿ, ‘ಬಾಳನೋಟ’ಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದ ‘ರನ್ನ ಸಾಹಿತ್ಯ ಪ್ರಶಸ್ತಿ’, ‘ಮುಕ್ಕದೊಳಗಿನ ಹಕ್ಕಿ!’ ಕವನ ಸಂಕಲನಕ್ಕೆ ಕಡೆಂಗೊಡ್ಲು ಕಾವ್ಯ ಪ್ರಶಸ್ತಿ, ‘ಆಸರೆಗಾಗಿ’ (ಕಥೆಗೆ) ಮುಂಬೆಳಕು ಕನ್ನಡ ಬಳಗ ಮುಂಬಯಿಯ ಮಾಸ್ತಿ ಕನ್ನಡ ಕಥಾ ಪ್ರಶಸ್ತಿ ಹೀಗೆ ಹಲವಾರು ಸನ್ಮಾನಗಳು ಸಂದಿವೆ. ಕಾಸರಗೋಡು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವವೂ ಅವರಿಗೆ ಲಭಿಸಿದೆ.
ಡಾ. ಉಪ್ಪಂಗಳ ರಾಮ ಭಟ್ ಇವರು ಸ್ಥಾಪಿಸಿದ ‘ಅಕಲಂಕ’ ಪ್ರಕಾಶನ ಮತ್ತು ಪ್ರತಿಷ್ಠಾನದ ಮೂಲಕ ಹಲವು ಕೃತಿ ಪ್ರಕಟಿಸಿದ್ದಾರೆ. ಅಕಲಂಕ ಪ್ರತಿಷ್ಠಾನದ ಮೂಲಕ 2006ರಿಂದ ‘ಅಕಲಂಕ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದಾರೆ. 2015ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ನೀಡಿರುವ ಶ್ರೀಯುತರು ಈ ಪ್ರಶಸ್ತಿಯನ್ನು ಪರಿಷತ್ತಿನ ಮೂಲಕ ಕೊಡಮಾಡುವ ವ್ಯವಸ್ಥೆ ಮಾಡಿದ್ದಾರೆ. ಅವರ ನಿಧನದ ನಂತರ ಪತ್ನಿ ಶ್ರೀಮತಿ ಶಂಕರಿ ಆರ್. ಭಟ್ ಅವರು ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ. ರೂ.25,000/- ನಗದು ಪುರಸ್ಕಾರ ಹೊಂದಿರುವ ಈ ಪ್ರಶಸ್ತಿಗೆ ಈ ಬಾರಿ ಮನೋವೈದ್ಯರೂ, ಸಾಹಿತಿಗಳೂ ಆದ ಡಾ. ಕೆ.ಎಸ್. ಪವಿತ್ರ ಅವರು ಆಯ್ಕೆಯಾಗಿದ್ದಾರೆ. ಶ್ರೀಮತಿ ಶಂಕರಿ ಆರ್. ಭಟ್ ಅವರದ್ದು ಬೆಲೆ ಕಟ್ಟಲಾಗದ ಸಾಹಿತ್ಯ ಸೇವೆ. ‘ಅಕಲಂಕ’ ಪ್ರಶಸ್ತಿಯ ಮೊತ್ತವನ್ನು ಹೆಚ್ಚು ಮಾಡುವುದರ ಮೂಲಕ ಪ್ರಶಸ್ತಿಗೆ ಇನ್ನಷ್ಟು ಮೆರುಗು ತಂದಿದ್ದಾರೆ.