ಮಂಗಳೂರು: ಮಂಗಳೂರಿನ ಜೆಪ್ಪು ಬಡಾವಣೆಯಲ್ಲಿರುವ ಸಾಹಿತಿ ವಿವೇಕ ರೈ ಅವರ ಮನೆಯಲ್ಲಿ ಅವರಿಗೆ ಡಾ. ಎಂ. ಚಿದಾನಂದ ಮೂರ್ತಿ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 06 ಆಗಸ್ಟ್ 2025ರಂದು ನಡೆಯಿತು.
ಸಮಾರಂಭದಲ್ಲಿ ಭಾಗವಹಿಸಿದ ಎಂದು ನಿವೃತ್ತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಮಾತನಾಡಿ “ಕನ್ನಡ ಸಾಹಿತ್ಯ ಲೋಕದ ಸಂಶೋಧಕರಲ್ಲಿ ವಿನೂತನ ವಿಶಿಷ್ಟತೆ ಸಾಧಿಸಿರುವವರು, ಕಠಿಣ ಪರಿಶ್ರಮದ ಮೂಲಕ ಸಂಶೋಧನೆ, ಕಾವ್ಯ ಸಂಗ್ರಹಿಸಿದವರು ವಿವೇಕ ರೈ. ಅವರಿಗೆ ಅರ್ಹವಾಗಿ ಚಿದಾನಂದ ಪ್ರಶಸ್ತಿ ಸಂದಿದೆ” ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ವಿವೇಕ ರೈ ಮಾತನಾಡಿ “ಚಿದಾನಂದ ಮೂರ್ತಿ ಹೆಸರಿನ ಪ್ರಶಸ್ತಿ ದೊರೆತಿದ್ದು ಕನ್ನಡ ಸಾಹಿತ್ಯ ಲೋಕದ ಸಂಶೋಧಕರು, ವಿದ್ವತ್ ಕೆಲಸ ಮಾಡುವವರಿಗೆ ಹಾಗೂ ಕಠಿಣ ಪರಿಶ್ರಮಕ್ಕೆ ಸಂದ ಪ್ರಶಸ್ತಿಯಾಗಿದೆ. ಈ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಲ್ಪ ಬರೆದರೂ ಬಹುಬೇಗ ಜನಪ್ರಿಯತೆ ಗಳಿಸಿಕೊಳ್ಳಬಹುದು. ಆದರೆ, ಸಾಹಿತ್ಯದ ಗಂಭೀರ ಪ್ರಕಾರಗಳಾದ ಗ್ರಂಥ ಸಂಪಾದನೆ, ಸಂಶೋಧನೆಗಳಂತಹ ಕೆಲಸ ಮಾಡುವವರು ಜನಪ್ರಿಯರಾಗುವುದು ಅಪರೂಪ. ಚಿದಾನಂದ ಮೂರ್ತಿ, ಎಂ. ಎಂ. ಕಲಬುರ್ಗಿ ಅವರಂತಹ ಹಿರಿಯರು ಈ ಕೆಲಸವನ್ನು ಪಟ್ಟು ಹಿಡಿದು ಮಾಡಿದ್ದಾರೆ” ಎಂದರು.
ಪ್ರಶಸ್ತಿಯು ಫಲಕ, ಶಾಲು, ರೂಪಾಯಿ 10 ಸಾವಿರ ನಗದನ್ನು ಒಳಗೊಂಡಿದೆ. ವಯೋಸಹಜ ಕಾರಣಗಳಿಂದ ವಿವೇಕ ರೈ ಅವರಿಗೆ ಬೆಂಗಳೂರಿನ ಕಾರ್ಯಕ್ರಮಕ್ಕೆ ಹಾಜರಾಗಲು ಆಗದ ಕಾರಣ ಅವರ ಮನೆಯಲ್ಲೇ ಪ್ರಶಸ್ತಿ ಪ್ರದಾನ ಮಾಡಿಲಾಯಿತು.
ಪ್ರಮುಖರಾದ ಅಶೋಕ್ ಆಳ್ವ, ನಿಕೇತನ, ಮಂಜುಳಾ ಶೆಟ್ಟಿ, ಜಿ. ಎನ್. ಮೋಹನ, ನರಸಿಂಹ ಮೂರ್ತಿ, ಕಲ್ಲೂರು ನಾಗೇಶ್, ಎನ್. ಶಿವಪ್ರಕಾಶ್, ಅಶೋಕ್ ಕಾಮತ್, ಉಲ್ಲಾಸ ರೈ ಉಪಸ್ಥಿತರಿದ್ದರು.