ಮಂಗಳೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ದಿನಾಂಕ 18 ಜನವರಿ 2025ರಂದು ಯುವಶಕ್ತಿಯ ಸಾಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ, ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಸನದಲ್ಲಿ ಗಣ್ಯಾತಿಗಣ್ಯರು ಈ ಪ್ರಶಸ್ತಿ ಪ್ರಧಾನ ಮಾಡುವರು.
ಮಾಲತಿ ಶೆಟ್ಟಿ ಮಾಣೂರು ಇವರು ಕಳೆದ 21 ವರುಷಗಳಿಂದ ಸಾಹಿತ್ಯ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಕಳೆದ 13 ವರುಷಗಳಿಂದ ಸಾಹಿತ್ಯ ಪರ ‘ಅಮೃತ ಪ್ರಕಾಶ ಪತ್ರಿಕೆ’ಯನ್ನು ನಡೆಸುತ್ತಿದ್ದಾರೆ ಹಾಗೂ 9 ಕೃತಿಗಳನ್ನು ಪ್ರಕಟಿಸಿದ್ದಾರೆ. ಇತರ ಹಿರಿಯ ಕಿರಿಯ ಲೇಖಕರ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ 49 ಕೃತಿಯನ್ನು ಪತ್ರಿಕೆಯ ವತಿಯಿಂದ ಬಿಡುಗಡೆಗೊಳಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಸಲುವಾಗಿ ಈಗಾಗಲೇ 117 ಶಾಲಾ-ಕಾಲೇಜುಗಳಲ್ಲಿ ಉಚಿತ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಅತ್ತಾವರದಲ್ಲಿ ಪತಿ ಸತ್ಯ ಪ್ರಕಾಶ್ ಶೆಟ್ಟಿ ಜೊತೆ ‘ಸಾಹಿತ್ಯ ನಂದನ’ದಲ್ಲಿ ವಾಸವಾಗಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಾದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ.
