ಬೆಂಗಳೂರು : ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲಕ್ಕೆ ಯಕ್ಷಗಾನದ ಮೂಲ ಸತ್ವ ತಿಳಿದುಕೊಳ್ಳಲು ಅಮೇರಿಕದ ಡಾ. ಮಾರ್ಷಲ್ ಗಂಜ್ ಮತ್ತು ತಂಡದವರು ದಿನಾಂಕ 23-01-2024ರಂದು ಆಗಮಿಸಿದರು.
ಕಳೆದ 45 ವರ್ಷದಿಂದ ಯಕ್ಷಗಾನ ಪ್ರದರ್ಶನ, ಕಮ್ಮಟ, ತರಬೇತಿ, ಕಾರ್ಯಗಾರ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಹೀಗೆ ಗುಣಾತ್ಮಕ ಪ್ರದರ್ಶನ ನೀಡುತ್ತಾ ಬಂದಿರುವ ಈ ಸಂಸ್ಥೆಯಲ್ಲಿ ಪ್ರಿಯಾಂಕ ಕೆ. ಮೋಹನ ನಿರ್ದೇಶನದಲ್ಲಿ ಸಂಪ್ರದಾಯ ಕೊಡಂಗಿ ನೃತ್ಯ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ಕೃಷ್ಣನ ಒಡ್ಡೋಲಗ, ರಾಜವೇಷದ ಒಡ್ಡೋಲಗ, ಯುದ್ಧ ನೃತ್ಯ, ಅಭಿನಯ, ಮಾತುಗಾರಿಕೆ ಬಗ್ಗೆ ಎರಡು ಗಂಟೆಗಳ ಕಾಲ ಪ್ರಾತ್ಯಕ್ಷಿಕೆ ಮತ್ತು ಕಂಸವಧೆ ಪ್ರಸಂಗದ ಒಂದು ಭಾಗವನ್ನು ಪ್ರದರ್ಶಿಸಲಾಯಿತು. ಕನ್ನಡದಲ್ಲಿ ಮಾಡಿದ ಈ ಪ್ರಾತ್ಯಕ್ಷಿಕೆಯ ಎಲ್ಲಾ ಭಾಗವನ್ನು ಆಂಗ್ಲ ಭಾಷಾ ಸಂವಹನದೊಂದಿಗೆ ಪ್ರದರ್ಶಿಸಲಾಯಿತು.
ಸಮಾಜ ಶಾಸ್ತ್ರದಲ್ಲಿ ಪಿ.ಎಚ್.ಡಿ. ಪಡೆದ ಮಾರ್ಷಲ್ ಗಂಜ್ ಅವರ ತಂಡದಲ್ಲಿ ಆಮೇರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕೆನಡಿ ಸ್ಕೂಲ್ ಗವರ್ನಮೆಂಟ್‌ನಲ್ಲಿ ನಾಯಕತ್ವ, ಸಂಘಟನೆ ಮತ್ತು ನಾಗರಿಕ ಸಮಾಜದಲ್ಲಿ ಹಿರಿಯ ಉಪನ್ಯಾಸಕರಾದ ರೀಟಾ ಈ ಹೌಸರ್ ಮುಂತಾದವರಿದ್ದರು.
ಪ್ರದರ್ಶನದಲ್ಲಿ ಪ್ರಿಯಾಂಕ ಕೆ. ಮೋಹನ್, ಶ್ರೀ ರಾಮ, ವಿಶ್ವನಾಥ ಉರಾಳ, ಶ್ರೀ ವಿದ್ಯಾ, ಚೈತ್ರ, ಶ್ರೀವತ್ಸ, ತೇಜಸ್ ಇನ್ನೀತರರು ಭಾಗವಹಿಸಿದರು. ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನರು ಯಕ್ಷದೇಗುಲದ 45 ವರ್ಷದ ಅನುಭವನ್ನು ಡಾ. ಮಾರ್ಷಲ್ ಗಂಜ್ ತಂಡದವರೊಂದಿಗೆ ಹಂಚಿಕೊಂಡರು.