ಮೈಸೂರು : ಕರ್ನಾಟಕದ ಪ್ರಸಿದ್ಧ ಧಾರವಾಡ ಘರಾನೆಯ ಏಳನೇ ತಲೆಮಾರಿನ ಕಲಾವಿದರಾದ ಡಾ. ಮೊಹಸಿನ್ ಖಾನ್ ರವರಿಗೆ ಈ ಬಾರಿ ದಸರಾ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಗೌರವ ಸಂದಿದೆ. ಅವರಿಗೆ ಸಿಕ್ಕ ಈ ಅವಕಾಶಕ್ಕೂ, ಮೈಸೂರು ಆಸ್ಥಾನಕ್ಕೂ ಮತ್ತು ಕರ್ನಾಟಕಕ್ಕೆ ಸಿತಾರ್ ವಾದ್ಯದ ಪರಿಚಯಕ್ಕೂ ವಿಶೇಷವಾದ ಸಂಬಂಧವಿದೆ
ಮೈಸೂರು ಆಸ್ಥಾನ 1911ರ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರನ್ನು ಆಳುತ್ತಿದ್ದ ಕಾಲ. ಸ್ವತಃ ವೀಣಾವಾದಕರಾಗಿದ್ದ ಅವರು ಕಲಾ ಪೋಷಕರೂ ಆಗಿದ್ದರು. ತಮ್ಮ ಆಸ್ಥಾನದಲ್ಲಿ ಅನೇಕ ಸಂಗೀತ ವಿದ್ವಾಂಸರಿಗೂ ಆಶ್ರಯ ನೀಡಿದ್ದರು. ಅದರಲ್ಲಿ ವೀಣೆ ಶೇಷಣ್ಣನವರೂ ಒಬ್ಬರು. ದೇಶದ ಶ್ರೇಷ್ಥ ಸಂಗೀತಗಾರರನ್ನು ತಮ್ಮ ಆಸ್ಥಾನಕ್ಕೆ ಕರೆಸಿ ದರ್ಬಾರಿನಲ್ಲಿ ಸಂಗೀತ ಕಛೇರಿಯನ್ನು ನಡೆಸುತ್ತಿದ್ದರು.
ಹೀಗಿರುವಾಗ, ಉಸ್ತಾದ್ ರಹಿಮತ್ ಖಾನರ ಕೀರ್ತಿ ಪೂನಾದ ಸಾಂಗ್ಲಿ, ಕೊಲ್ಹಾಪುರ, ಇಚರಕರಂಜಿ ದಾಟಿ ಮೈಸೂರಿನವರೆಗೂ ಹಬ್ಬಿತು. ಇವರ ಸಿತಾರ್ ವಾದನದ ಬಗ್ಗೆ ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರು, ದರ್ಬಾರಿನಲ್ಲಿ ಕಛೇರಿ ನಡೆಸಲು ಅವರಿಗೆ ಆಮಂತ್ರಣವನ್ನು ನೀಡಿದರು. ಕಛೇರಿ ಮುಗಿದಾಗ ವೀಣೆ ಶೇಷಣ್ಣನವರು ಆನಂದ ಬಾಷ್ಪ ಸುರಿಸಿ ರಹಿಮತ್ ಖಾನರನ್ನು ಅಪ್ಪಿಕೊಂಡರು. ನಾಲ್ವಡಿ ಕೃಷ್ಣರಾಜ ಒಡೆಯರ ಮಹಾರಾಜರು ಇವರ ಕಛೇರಿಯನ್ನು ಕೇಳಿ ಬಂಗಾರದ ಮೆಡಲ್ ಅನ್ನು ನೀಡಿದ್ದಲ್ಲದೇ ‘ಸಿತಾರ್ ರತ್ನ’ ಎಂಬ ಬಿರುದನ್ನು ನೀಡಿದವರೂ ತಮ್ಮ ಆಸ್ಥಾನದಲ್ಲಿ ರಹಿಮತ್ ಖಾನರು ಸಿತಾರ್ ಕಲಾವಿದರಾಗಿರಬೇಕೆಂದು ಬಯಸಿದ್ದರು. ಆದರೆ ಏಕಾಂತವನ್ನು ಬಯಸುತ್ತಿದ್ದ ಅವರ ಮನಸು ಎಳೆದು ತಂದದ್ದು ಧಾರವಾಡಕ್ಕೆ.
ಮೈಸೂರಿನಿಂದ ಪೂನಾಗೆ ಹೋಗುವಾಗ ಧಾರವಾಡದಲ್ಲಿಳಿದ ರಹಿಮತ್ ಖಾನರು ಧಾರವಾಡದ ಪರಿಸರಕ್ಕೆ ಮನಸೋತು ಅಲ್ಲಿಯೆ ಉಳಿಯಬೇಕೆಂದು ನಿರ್ಧರಿಸಿದರು. ಧಾರವಾಡದಲ್ಲಿಯೇ ಸಿತಾರ್ ಕಲಿಸುತ್ತಾ, ಸಿತಾರ್ ಕಾರ್ಯಕ್ರಮಗಳನ್ನು ನೀಡುತ್ತಾ ಕಾರ್ನಾಟಕದ ಮೂಲಕ ದಕ್ಷಿಣ ಭಾರತಕ್ಕೆ ಸಿತಾರ್ ವಾದ್ಯವನ್ನು ಪರಿಚಯಿಸಿದ ಮೊದಲಿಗರಾದರು.
ಸಿತಾರ್ ರತ್ನ ರಹಿಮತ್ ಖಾನರ ನಂತರ ಅವರ ಮಗ ಪ್ರೊ. ಅಬ್ದುಲ್ ಕರೀಂ ಖಾನ್, ಅವರ ಮಕ್ಕಳಾದ, ಉ. ಉಸ್ಮಾನ್ ಖಾನ್, ಉ. ಬಾಲೇ ಖಾನ್ ಹಾಗೂ ಉ. ಹಮೀದ್ ಖಾನ್ ರಂತಹ ಕಲಾವಿದರು ಧಾರವಾಡದಲ್ಲೇ ನೆಲೆಯೂರಿ ಕಾರ್ನಾಟಕದಲ್ಲಿ ಸಿತಾರ್ ನ ಮಹಾನ್ ಪರಂಪರೆಯನ್ನೇ ಸೃಷ್ಟಿಸಿದರು. ಧಾರವಾಡದಲ್ಲೇ ನೂರು ವರ್ಷಗಳಿಗೂ ಹೆಚ್ಚು ಕಾಲ ಘರಾನೆಯು ಬೆಳೆದಿದ್ದರಿಂದ ಇಂದೋರ್ ಬೀನ್ ಕಾರ್ ಘರಾನೆಯಾಗಿದ್ದದ್ದು ‘ಧಾರವಾಡ ಘರಾನೆ’ಯಾದದ್ದು ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಹೆಮ್ಮೆ ಎಂದೇ ಹೇಳಬಹುದು.
ರಹಿಮತ್ ಖಾನರ ಮರಿಮೊಮ್ಮಗನಾದ ಮೊಹಸಿನ್ ಖಾನ್ ತಮ್ಮ ಅಜ್ಜ ಅಬ್ದುಲ್ ಕರೀಂ ಖಾನರಿಂದ ತಮ್ಮ ಐದನೇ ವರ್ಷದಿಂದಲೇ ಸಿತಾರ್ ವಾದನವನ್ನು ಕಲಿಯಲು ಪ್ರಾರಂಭಿಸಿ ನಂತರ ತಮ್ಮ ತಂದೆ ಉ. ಹಮೀದ್ ಖಾನ್ ಅವರಲ್ಲಿ ಕಲಿಕೆಯನ್ನು ಮುಂದುವರೆಸಿದರು. ದೇಶದ ಹಲವು ಕಡೆ ಸಿತಾರ್ ಕಛೇರಿಯನ್ನು ನೀಡಿದ್ದಲ್ಲದೇ, ಯೂರೋಪ್, ಜಪಾನ್, ಅಜ಼ರ್ಬೈಜಾನ್, ಈಜಿಪ್ಟ್, ನೇಪಾಳ, ರಷ್ಯಾ ಮುಂತಾದ ಹಲವು ದೇಶಗಳಲ್ಲಿ ಸಿತಾರ್ ಕಾರ್ಯಕ್ರಮ ನೀಡಿದ್ದಾರೆ. ಹಲವಾರು ಶಿಷ್ಯರನ್ನು ಹೊಂದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಶ್ರೇಣಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಕಲಾವಿದರು ಎಂಬ ಹೆಮ್ಮೆ ಇವರದ್ದು. ಪರಂಪರಾಗತವಾಗಿ ಸಿತಾರ್ ವಾದನವನ್ನು ಕಲಿಯುತ್ತಾ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಯದಿಂದ ಪಿ.ಎಚ್‌ಡಿ. ಪದವಿ ಪಡೆದಿದ್ದಾರೆ ಮತ್ತು ‘ರಾಗ ಚಿಕಿತ್ಸಾ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿರುವ ಧಾರವಾಡದ ಸಿತಾರ್ ವಾದಕರಾದ ಡಾ. ಮೊಹಸಿನ್ ಖಾನ್ ಇವರಿಗೆ ಪ್ರತಿಷ್ಠಿತ ದಸರಾ ಉತ್ಸವದ ಅರಮನೆಯ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ದೊರೆತಿರುವುದು ಹೆಮ್ಮೆಯೇ ಸರಿ.