ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ದಿನಾಂಕ 08 ಫೆಬ್ರವರಿ 2025ರಂದು ನಡೆಯಿತು
ಹಿರಿಯ ರಂಗಕರ್ಮಿ ಗುಲ್ವಾಡಿ ರಾಮದಾಸ್ ದತ್ತಾತ್ರೇಯ ಭಟ್ ಇವರಿಗೆ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ’ ಹಾಗೂ ಹಿರಿಯ ಸಾಹಿತಿ, ಅನುವಾದಕಿ ಡಾ. ಗೀತಾ ಶೆಣೈಯವರಿಗೆ ‘ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಪ್ರಸ್ತಾವಿಕವಾಗಿ ಮಾತನಾಡಿ, “ಡಾ. ಪಿ. ದಯಾನಂದ ಪೈಯವರು ಒಂದು ಕೋಟಿ ರೂ. ದೇಣಿಗೆಯನ್ನು ವಿಶ್ವ ಕೊಂಕಣಿ ಕೇಂದ್ರಕ್ಕೆ ನೀಡಿದ್ದು, ಇದನ್ನು ಬಳಸಿಕೊಂಡು ಪ್ರತಿ ವರ್ಷ ಪ್ರಶಸ್ತಿಯ ಜತೆಗೆ ವಿವಿಧ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದ್ದರು. ಇದನ್ನು ಮುಂದುವರಿಸುವ ಕೆಲಸವನ್ನು ಕೇಂದ್ರ ವತಿಯಿಂದ ಮಾಡುತ್ತಿದ್ದೇವೆ” ಎಂದರು.
ಉದ್ಯಮಿ ಡಾ. ಪಿ. ದಯಾನಂದ ಪೈ ಆನ್ ಲೈನ್ ಮೂಲಕ ಮಾತನಾಡಿ, “ಕೊಂಕಣಿ ಭಾಷೆ ಬಲಿಷ್ಠವಾಗಿ ಬೆಳೆಯುವಂತಾಗಬೇಕು. ಕೊಂಕಣಿಗರು ಮಾತೃ ಭಾಷೆ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಕೊಂಕಣಿ ಭಾಷೆ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು” ಎಂದರು.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಸುಧಾಕರ ಭಟ್ ನೇತೃತ್ವದ ಪ್ರಸಿದ್ದ ಕಲಾತಂಡ ಆಮ್ಮಿ ರಂಗಕರ್ಮಿ ಮುಂಬಯಿ ಇವರಿಂದ ‘ಪೋಸ್ಟ್ ಕಾರ್ಡ್’ ಹಾಗೂ ಕರ್ನಾಟಕ-ಕೇರಳ ರಾಜ್ಯಗಳನ್ನು ಪ್ರತಿನಿಧಿಸಿ ಕಾಸರಗೋಡು ಚಿನ್ನಾರವರ ನೇತೃತ್ವದ ರಂಗ ಚಿನ್ನಾರಿ ಕಾಸರಗೋಡು ಅಭಿನಯಿಸುವ ಜನಪ್ರಿಯ ‘ಕರ್ಮಾಧೀನ್’ ಕೊಂಕಣಿ ನಾಟಕ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಬಿ.ಆರ್. ಭಟ್, ಡಾ. ಕಸ್ತೂರಿ ಮೋಹನ ಪೈ, ವಿಲಿಯಂ ಡಿ’ಸೋಜಾ, ರಮೇಶ್ ನಾಯಕ್, ನಾರಾಯಣ್ ನಾಯಕ್, ಶಕುಂತಲಾ ಕಿಣಿ ಮೊದಲಾದವರು ಉಪಸ್ಥಿತರಿದ್ದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಹೀಗೆ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 500ಕ್ಕೂ ಮಿಕ್ಕಿ ಜನರು ಭಾಗವಹಿಸಿ ನಾಟಕದ ಆನಂದವನ್ನು ಸವಿದರು.