ಬೆಂಗಳೂರು : ರಾಜ್ಯ ಸರಕಾರ ನೀಡುವ ಪ್ರಸಕ್ತ ಸಾಲಿನ (2023-24) ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಬೆಂಗಳೂರಿನ ಸಂಗೀತ ಕಲಾವಿದೆ ಡಾ. ಪದ್ಮಾ ಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ಮುಖ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯದ ಒಬ್ಬರು ಹಿರಿಯ ಸಂಗೀತ ಸಾಧಕರನ್ನು ಗುರುತಿಸಿ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಯನ್ನು ನೀಡಿ ರಾಜ್ಯ ಸರಕಾರದಿ೦ದ ಗೌರವಿಸಲಾಗುತ್ತದೆ. ಪ್ರಶಸ್ತಿಯು ರೂ.5 ಲಕ್ಷ ನಗದು ಮತ್ತು ಸರಸ್ವತಿ ವಿಗ್ರಹದ ಸ್ಮರಣಿಕೆ, ಪ್ರಶಸ್ತಿ ಫಲಕ, ಶಾಲು, ಹಾರ ಮತ್ತು ಫಲತಾಂಬೂಲಗಳನ್ನು ಒಳಗೊಂಡಿದೆ.
ದಿನಾಂಕ 15-10-2023ರಂದು ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗಾಗಿ ಪ್ರಸಿದ್ಧ ಕ್ಲಾರಿಯೋನೆಟ್ ವಾದಕರಾದ ಡಾ. ಪಂಡಿತ್ ನರಸಿಂಹಲು ವಡವಾಟಿ ಅವರ ಅಧ್ಯಕ್ಷತೆಯ ಸಮಿತಿಯು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ಪದ್ಮಾ ಮೂರ್ತಿಯವರನ್ನು ಆಯ್ಕೆ ಮಾಡಿದೆ.
ಡಾ. ಪದ್ಮಾ ಮೂರ್ತಿಯವರಿಗೆ ಈಗ 91 ವರ್ಷ. ಬೆಂಗಳೂರಿನಲ್ಲಿ ವಾಸವಾಗಿರುವ ಅವರು, ಮೈಸೂರು ವಾಸು ದೇವಾಚಾರ್ಯ, ಟಿ. ಚೌಡಯ್ಯ, ಟಿ. ಪುಟ್ಟಸ್ವಾಮಯ್ಯನವರ ಬಳಿ ಸಂಗೀತಾಭ್ಯಾಸ; ಎಚ್.ಎಸ್. ಕೃಷ್ಣಮೂರ್ತಿ, ಆರ್.ಎಸ್. ಕೇಶವಮೂರ್ತಿ ಬಳಿ ವೀಣಾ ವಾದನ ಕಲಿತಿದ್ದಾರೆ. ಬಿಎಸ್‌ಸಿ, ಎಂಎ, ಪಿಎಚ್.ಡಿ, ಡಿ.ಲಿಟ್. ಪದವಿ ಪಡೆದಿದ್ದಾರೆ. ಸಂಗೀತದಲ್ಲಿ ವಿದ್ವತ್, ಸೈಕಾಲಜಿ ಆಫ್ ಮ್ಯೂಸಿಕ್ ಎಂಬ ವಿಷಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದು, ಇವರಿಗೆ ಕರ್ನಾಟಕ ಕಲಾಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.