ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಡಾ.ಪುನೀತ್ ರಾಜಕುಮಾರ ಕೋಚಿಂಗ್ ಸೆಂಟರ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2023-24ನೇ ಸಾಲಿನ ಕನ್ನಡ ಪ್ರವೇಶ ಪರೀಕ್ಷಾ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 22-05-2023ರಂದು ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜುರವರು ʻಈ ನೆಲದ ಭಾಷೆಯನ್ನು ಕಲಿಯದಿದ್ದಲ್ಲಿ ಇಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜನರಿಗೆ ಈ ಮಣ್ಣಿನ ಪ್ರೀತಿ ಹುಟ್ಟುವುದಾದರು ಹೇಗೆ..? ಕನ್ನಡ ನಾಡಿನಲ್ಲಿ ನೆಲೆನಿಂತ ದೇಶ ವಿದೇಶದ ಜನರು ಈ ನೆಲದ ಭಾಷೆಯನ್ನು ಕಲಿಯುವ ಅನಿವಾರ್ಯತೆಯನ್ನು ಕನ್ನಡಿಗರಾದ ನಾವು ಮಾಡುತ್ತಿಲ್ಲ’. ಕನ್ನಡ ನಮ್ಮವರ ಜೊತೆ ಎಲ್ಲರಿಗೂ ಅನ್ನದ ಭಾಷೆಯಾಗಿದೆ ಎನ್ನುವ ಸತ್ಯ ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಕೇಂದ್ರಿಯ ವಿದ್ಯಾಲಯದಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡ ಭಾಷೆಯಿಂದ ವಂಚಿತರಾಗಿರುವುದನ್ನು ಮನಗಂಡು ಅಲ್ಲಿಯದೇ ಶಾಲೆಯ ಶಿಕ್ಷಕರಾದ ಶ್ರೀ ನಾರಾಯಣಸ್ವಾಮಿಯವರು ಕನ್ನಡದ ಮೇಲಿನ ಪ್ರೀತಿಯಿಂದಾಗಿ ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರವೇಶ ಪರೀಕ್ಷೆಯನ್ನು ಕಟ್ಟಿಸುವ ಮೂಲಕ ಕನ್ನಡವನ್ನು ಉಳಿಸುವ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶಿಕ್ಷಕರು ನಾಡಿನಾದ್ಯಂತ ಹೆಚ್ಚಾಗಬೇಕಿದೆ ಎಂದು ಡಾ.ಪದ್ಮಿನಿ ನಾಗರಾಜು ಅವರು ಅಭಿಪ್ರಾಯಪಟ್ಟರು.
ಕನ್ನಡ ಭಾಷೆ ಉಳಿಯುವಲ್ಲಿ ಶಾಸನಗಳ ಮಹತ್ವ ಹಾಗೂ ಕವಿಗಳ ಕೊಡುಗೆಯ ಬಗ್ಗೆ ಪ್ರಾಧ್ಯಾಪಕರಾದ ಡಾ.ಅನ್ನದಾನೇಶ್ವರವರು ಅಭಿಪ್ರಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೆಶ್ವರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರತ್ನಾಕರ ಶೆಟ್ಟಿ ಅವರು ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಶ್ರೀ ರೇವಣ್ಣ ಸಿದ್ಧಪ್ಪನವರು ಮಾತಾನಾಡಿ ಕನ್ನಡ ಭಾಷೆಯ ಅನನ್ಯತೆ ಹಾಗೂ ವಿಶೇಷತೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ.ಪುನೀತ ರಾಜಕುಮಾರ ಕೋಚಿಂಗ್ ಸೆಂಟರ್‌ನ ಅಧ್ಯಕ್ಷರಾದ ಶ್ರೀಮತಿ ಆಶಾ ಎನ್ ಹಾಗೂ ನಿವೃತ್ತ ಸೈನಿಕರಾದ ಶ್ರೀ ಯೋಗಾನಂದ ಅವರು ಉಪಸ್ಥಿತರಿದ್ದರು.