ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ರಾಜ್ ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ಉಮೇಶ್ ಅವರನ್ನು ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ರಾಜ್ ಕುಮಾರ್ ಅವರು ತಮಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಂದಾಗ ನಗದು ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದರು. ನಂತರದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ದತ್ತಿನಿಧಿಗೆ ಇನ್ನಷ್ಟು ಮೊತ್ತವನ್ನು ಸೇರಿಸಿದ್ದರು.
ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯನ್ನು ಪ್ರವೇಶಿಸಿದ ಎಂ.ಎಸ್. ಉಮೇಶ್ ಇವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಾಲನಟರಾಗಿ ಹೆಸರು ಮಾಡುವ ಮೂಲಕ ಕಲಾರಂಗ ಪ್ರವೇಶಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಕೂಡ ಬಾಲ ನಟನಾಗಿ ಪ್ರಸಿದ್ಧಿ ಪಡೆದ ಇವರು ಪುಟ್ಟಣ್ಣ ಕಣಗಾಲ್ ಇವರ ಕಥಾ ಸಂಗಮದ ಮೂಲಕ ಬೆಳ್ಳಿ ತೆರೆಗೆ ತೆರಳಿ ಈವರೆಗೂ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ಅವರು ಮುಖ್ಯವಾಗಿ ಹಾಸ್ಯ ಪಾತ್ರಗಳಿಗೆ ಘನತೆ ಗೌರವವನ್ನು ತಂದಿರುವುದರಲ್ಲದೆ, ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಶಬ್ದವೇಧಿ’ಯವರೆಗೂ ಅಣ್ಣಾವ್ರ ಜೊತೆ ಅನೇಕ ಚಿತ್ರಗಳಲ್ಲಿ ಉಮೇಶ್ ಅಭಿನಯಿಸಿದ್ದಾರೆ. ಉತ್ತಮ ಹಾರ್ಮೋನಿಯಂ ವಾದಕ, ಗಾಯಕ ಕೂಡ ಆಗಿರುವ ಉಮೇಶ್ ಉತ್ತಮ ಬರಹಗಾರರೂ ಕೂಡ. ‘ಬಣ್ಣದ ಘಂಟೆ’ ಮತ್ತು ‘ಬೊಂಬೆಯಾಟವಯ್ಯ’ ಅವರ ಪ್ರಸಿದ್ಧ ಕೃತಿಗಳು. ಕಿರುತೆರೆಗೆ ಧಾರಾವಾಹಿಗಳನ್ನು ಬರೆದು ನಿರ್ದೇಶಿಸಿದ್ದಾರೆ.