ಉಡುಪಿ : ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಇವರನ್ನು 2025ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಆಯ್ಕೆ ಮಾಡಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಪ್ರಶಸ್ತಿಯನ್ನು ದಿನಾಂಕ 18 ಅಕ್ಟೋಬರ್ 2025ರಂದು ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.
ಡಾ. ರಮಾನಂದ ಬನಾರಿಯವರು ಖ್ಯಾತ ಪ್ರಸಂಗಕರ್ತ ಕೀರಿಕ್ಕಾಡು ವಿಷ್ಣು ಭಟ್ಟ ಹಾಗೂ ಜಾನಪದ ಹಾಡುಗಾರ್ತಿ ಪರಮೇಶ್ವರಿ ಅಮ್ಮನವರ ಪುತ್ರನಾಗಿ 1940 ಜೂನ್ 4ರಂದು ಕಾಸರಗೋಡಿನ ಕೀರಿಕ್ಕಾಡಿನಲ್ಲಿ ಜನಿಸಿದರು. ಬನಾರಿಯವರು ವೃತ್ತಿಯಿಂದ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಬರಹಗಾರರು ಮತ್ತು ತಾಳಮದ್ದಳೆ ಅರ್ಥಧಾರಿಗಳು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವೀಧರರು. ವೃತ್ತಿಯೊಂದಿಗೆ ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. 10ಕ್ಕೂ ಹೆಚ್ಚು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಎಳೆಯರ ಗೆಳೆಯ (ಮಕ್ಕಳ ಕವನ ಸಂಕಲನ), ಕೊಳಲು, ನಮ್ಮಿಬ್ಬರ ನಡುವೆ, ನೆನಪುಗಳ ನೆರಳಿನಲ್ಲಿ, ಆರೋಗ್ಯಗೀತೆ (ವೈದ್ಯಕೀಯ ಕವನ ಸಂಕಲನ,), ಗುಟುಕುಗಳು (ಹನಿಗವನ ಸಂಕಲನ), ಮಧುಸಿಂಚನ, ಆರವೆ (ಪ್ರಬಂಧ ಸಂಕಲನ) ಕೀರಿಕ್ಕಾಡು ಸ್ಮಾರಕ ಯಕ್ಷಗಾನ, ಪರಾಗಸ್ಪರ್ಶ- ಬನಾರಿ ಸಮಗ್ರ ಕವಿತೆಗಳು ಇವರ ಪ್ರಮುಖ ಪ್ರಕಟಿತ ಕೃತಿಗಳು. ಸಾಧನಾ (ರಾಷ್ಟ್ರಕವಿ ಗೋವಿಂದ ಪೈ ಸ್ಮರಣ ಸಂಚಿಕೆ), ಐ.ಎಂ.ಎ. ಸ್ಮರಣ ಸಂಚಿಕೆ, ಶಿವಶಕ್ತಿ, ಆರತಿ ಪರಮೇಶ್ವರಿ ಅಮ್ಮ ಅವರು ಸಂಗ್ರಹಿಸಿದ ಜಾನಪದ ಹಾಡುಗಳು ಇತ್ಯಾದಿ ಸಂಪಾದಿತ ಕೃತಿಗಳು.
ಸಾಹಿತ್ಯ, ಯಕ್ಷಗಾನ, ಕಾಸರಗೋಡು ಕನ್ನಡ ಪರ ಹೋರಾಟ, ಭಾಷಣ, ಸಮಾಜಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸ್ಥಾಪಕಾಧ್ಯಕ್ಷರಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಂಘಟಕರಾಗಿ ಕಾರ್ಯನಿರ್ವಹಿಸಿರುವ ಇವರು ಗುಲಬರ್ಗಾ ಡಾ. ಎಸ್.ಪಿ. ಶಂಕರ್ ಪ್ರತಿಷ್ಠಾನದ ಶ್ರೇಷ್ಠ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಗೋವಿಂದ ಪೈ ಕಲಾ ಅಕಾಡೆಮಿ ಪ್ರಶಸ್ತಿ, ಶ್ರೇಷ್ಠ ಕುಟುಂಬ ವೈದ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾವ್ಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸಂಮಾನಗಳಿಗೆ ಭಾಜನರಾಗಿದ್ದಾರೆ.