ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಪ್ರತಿವರ್ಷ ನೀಡುವ ‘ವೀರಾರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಸಾಹಿತ್ಯದಲ್ಲಿ ಡಾ. ಸಾಯಿಗೀತಾ ಹಾಗೂ ಕಲೆಯಲ್ಲಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂ.25,000/- ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿದ್ದು, ದಿನಾಂಕ 14 ಫೆಬ್ರುವರಿ 2026ರಂದು ತೊಕ್ಕೊಟ್ಟಿನಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಧಾನ ಮಾಡಲಾಗುತ್ತದೆ. ಹಲವು ಮಂದಿ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಹಾಗೂ ಇದೇ ಸಂಸ್ಥೆಯಲ್ಲಿ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ. ಸಾಯಿಗೀತಾ ಅವರು ಸಂಶೋಧನೆ, ಪದಕೋಶ, ಕವನಸಂಕಲನ, ಜೀವನಚರಿತ್ರೆ, ಭಾಷೆ ಕಲಿಯುವಿಕೆಯ ಪಠ್ಯ, ಅನುವಾದ ಹಾಗೂ ಸಂಪಾದಿತ ಪುಸ್ತಕಗಳು ಸೇರಿ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ವಿದುಷಿ ರಾಜಶ್ರೀ ಉಳ್ಳಾಲ್ ಇವರು ತಮ್ಮ ತಂದೆ ಕರ್ನಾಟಕ ಕಲಾ ತಿಲಕ ಮೋಹನ್ ಕುಮಾರ್ ಇವರಿಂದ ಭರತನಾಟ್ಯ ಶಿಕ್ಷಣ ಪಡೆದು, ನೃತ್ಯ ವಿದ್ವತ್ ಪರೀಕ್ಷೆಯಲ್ಲಿ ಪದವಿ, ಬೆಂಗಳೂರಿನ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿಯಲ್ಲಿ ಬಿ.ಎ. ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯದಲ್ಲಿ ಎಂ.ಎ. ಪದವಿಯನ್ನು ಗಳಿಸಿರುತ್ತಾರೆ. ರಾಜ್ಯ ಸರ್ಕಾರ ನಡೆಸುವ ಭರತನಾಟ್ಯ ಪ್ರಾಥಮಿಕ, ಮಾಧ್ಯಮಿಕ, ವಿದ್ವತ್ ಪರೀಕ್ಷೆಗಳಿಗೆ ಪರೀಕ್ಷಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿವಿಯಲ್ಲಿ ಲಲಿತಕಲಾ ವಿಭಾಗದ ಅಧ್ಯಯ ಮಂಡಳಿಯ ಸದಸ್ಯರಾಗಿ, ನೃತ್ಯಕಲಾ ಪಠ್ಯವಸ್ತು ತಯಾರಿಕೆಯ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಅವರು ತಮ್ಮ ನೃತ್ಯ ಪ್ರತಿಭೆ ಮತ್ತು ಸೇವೆಗಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
