ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಹಲವು ಪ್ರಮುಖ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಒಡನಾಟ ಹೊಂದಿದ, ಸಾಮಾಜಿಕ ಹೋರಾಟಗಳಲ್ಲಿ ನಿರತರಾದ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ ಯಾದಗಿರಿಯವರಾದ ಡಾ. ಶಿವಶರಣ ಗೋಡ್ರಾಳ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ.
ಡಾ. ಶಿವಶರಣ ಗೋಡ್ರಾಳ ಇವರು ಬಿ.ಇ.ಎಂ.ಎಸ್. ಪದವೀಧರರಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದು, ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದು, ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತು ಅಭಿಮಾನ ಮತ್ತು ಸಮಾನ ಸಮಾಜದ ಕುರಿತ ಕಾಳಜಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತರಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಆಶಿಸಿದ್ದಾರೆ.