ಬಾಗಲಕೋಟೆ : ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ (ನೋಂ) ವತಿಯಿಂದ ‘ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ್ ಶರ್ಮಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ದಿನಾಂಕ 03-12-2023ರಂದು ಬೆಳಿಗ್ಗೆ 10.30 ಗಂಟೆಗೆ ಬಾಗಲಕೋಟೆ ಬ.ವಿ.ವಿ.ವ. ಸಂಘ, ಪಾಲಿಟೆಕ್ನಿಕ್ ಕಾಲೇಜು, ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.
ಅ.ಭಾ.ಸಾ.ಪ. ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಸ್.ಜಿ. ಕೋಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಶ್ರೀ ಶಿವಯೋಗಿ ಮಂದಿರ ಎಸ್.ಕೆ.ಎಸ್. ಪಾಠ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಿದಾನಂದಸ್ವಾಮಿ ಹಿರೇಮಠ ಇವರು ‘ವಚನ ಸಾಹಿತ್ಯದಲ್ಲಿ ಸಂಸ್ಕೃತ’ ಎಂಬ ವಿಷಯದ ಬಗ್ಗೆ ಪ್ರಧಾನ ಭಾಷಣ ಮಾಡಲಿರುವರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕಿ, ‘ಸಂಸ್ಕೃತ ಭಾರತಿ’ಯ ನಿಕಟಪೂರ್ವ ವಡೋದರಾ ಜಿಲ್ಲಾ ಸಂಯೋಜಕರಾದ ಡಾ. ಸುಮಾ ಶಿವಾನಂದ ದೇಸಾಯಿ ಇವರಿಗೆ ‘ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ್ ಶರ್ಮಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ನಗದು ರೂ.25,000/-, ಪ್ರಶಸ್ತಿ ಪತ್ರ ಮತ್ತು ಶಾರದಾ ಮೂರ್ತಿಯನ್ನು ಒಳಗೊಂಡಿರುತ್ತದೆ. ಬಾಗಲಕೋಟೆ ಜಿಲ್ಲೆಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದೆ.
ವಿದ್ವಾನ್ ನಡಳ್ಳಿ ಡಾ. ರಂಗನಾಥ ಶರ್ಮಾ :
ಭಾರತದ ಭಾವಸಮೃದ್ಧಿ ಮತ್ತು ಶಾಸ್ತ್ರಸಂಪತ್ತು ದೇಶದ ಎಲ್ಲಾ ಭಾಷೆಗಳಿಂದಲೂ ತುಂಬಿ ಬಂದಿದೆ. ಭಾರತವೆಂದರೆ ಕೇವಲ ಭೂಪಟವಲ್ಲ. ಮಾನವ ಉನ್ನತಿಯ ಪರಮಸಾಧ್ಯತೆಗಳನ್ನು ಶೋಧಿಸಿದ ಸಂಸ್ಕೃತಿ. ಮಾತನ್ನು ಮಂತ್ರವಾಗಿಸಿದ ಮಣ್ಣಿದು. ಈ ಶೋಧ ಮತ್ತು ಬೋಧದಲ್ಲಿ ಸಾಧಕರನ್ನು ಕೈ ಹಿಡಿದು ನಡೆಸಿದ್ದು ಭಾಷೆ. ಆ ಭಾಷೆಯಿಂದ ಅಭಿವ್ಯಕ್ತವಾದ ಎಲ್ಲಾ ರೂಪಗಳೂ ಸಾಹಿತ್ಯವೇ. ಹೀಗೆ ಭಾರತದ ಉದ್ದಗಲಕ್ಕೆ ಅಭಿವ್ಯಕ್ತವಾಗಿ ವ್ಯಾಪಿಸಿಕೊಂಡಿರುವ ಎಲ್ಲ ಭಾಷೆ ಮತ್ತು ಸಾಹಿತ್ಯಕ ಚಟುವಟಿಕೆಗಳ ಪ್ರೇರಕ, ಪೋಷಕ ಮತ್ತು ರಕ್ಷಕನಾಗಿ ಕೆಲಸ ಮಾಡುತ್ತಿರುವ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್.
ವಿದ್ವಾನ್ ನಡಳ್ಳಿ ಡಾ. ರಂಗನಾಥ ಶರ್ಮಾ ಅವರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನಡಹಳ್ಳಿಯಲ್ಲಿ ಏಪ್ರಿಲ್ 7, 1919ರಲ್ಲಿ ಜನಿಸಿದರು. ಕಿತ್ತು ತಿನ್ನುವ ಬಡತನದ ಮಧ್ಯೆಯೂ ರಂಗನಾಥ ಶರ್ಮಾ ಅವರಲ್ಲಿ ಓದಿನ ಹಂಬಲ ಮನೆ ಮಾಡಿತ್ತು. ಅಗಡಿ ಆನಂದವನ ಆಶ್ರಮ, ಕೆಳದಿ ಸಂಸ್ಕೃತ ಪಾಠಶಾಲೆ, ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಾಲೇಜುಗಳಲ್ಲಿ ಸಂಸ್ಕೃತ ಅಧ್ಯಯನ ಮಾಡಿ ಪಾಂಡಿತ್ಯವನ್ನು ಗಳಿಸಿದರು. ಶರ್ಮ ಅವರು ಭಾರತೀಯ ದರ್ಶನ, ವ್ಯಾಕರಣ ಹಾಗೂ ಅಲಂಕಾರ ಶಾಸ್ತ್ರಗಳಲ್ಲಿ “ಇದಂ ಇತ್ಥಂ” ಎನ್ನುವಷ್ಟು ಮೇರು ವಿದ್ವಾಂಸರು.
ಡಿ.ವಿ.ಜಿ.ಯವರ ಆಪ್ತ ಒಡನಾಡಿಯಾಗಿದ್ದ ರಂಗನಾಥ ಶರ್ಮಾ ಇವರು ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವವರು. ಸಾಹಿತ್ಯ ಪರಿಷತ್ ವರ್ಷ ಪೂರ್ತಿ ರಾಜ್ಯದ ವಿವಿಧೆಡೆಗಳಲ್ಲಿ ಅವರ ಜನ್ಮ ಶತಾಬ್ದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿದೆ. ವಿದ್ವಾನ್ ರಂಗನಾಥ ಶರ್ಮಾ ಸೇವಾ ಪ್ರತಿಷ್ಠಾನ ಮತ್ತು ಅವರ ಕುಟುಂಬದವರ ಸಹಕಾರದಿಂದ 2018ನೇ ವರ್ಷದಿಂದ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಗುರುತಿಸಿ ಸನ್ಮಾನಿಸಿ, ಪುರಸ್ಕರಿಸಲಾಗುತ್ತಿದೆ. 2023ನೇ ಸಾಲಿನ ಈ ಪುರಸ್ಕಾರಕ್ಕೆ ಡಾ. ಸುಮಾ ದೇಸಾಯಿ ಅವರು ಭಾಜನರಾಗುತ್ತಿರುವದು ಸಾಹಿತ್ಯಾಭಿಮಾನಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಡಾ. ಸುಮಾ ಶಿವಾನಂದ ದೇಸಾಯಿ :
1960ರಲ್ಲಿ ಚಿಕ್ಕೋಡಿಯಲ್ಲಿ ಜನಿಸಿದ ಸುಮಾ ದೇಸಾಯಿ ಅವರು ವಿವಾಹವಾದ ಬಳಿಕ ಗುಜರಾತಿನ ವಡೋದರಾದ ನಿವಾಸಿಯಾದರು. ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಾಪಿಕೆಯಾಗಿ ಕಾರ್ಯನಿರ್ವಹಿಸಿದ ಇವರು, ಸಂಸ್ಕೃತ ಭಾಷೆಯಲ್ಲಿ ಶೋಧ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದು ಕೆಲಕಾಲ ಶೋಧಸಹಾಯಕರಾಗಿ ಕೆಲಸಮಾಡಿದರು. ಲೇಖಕಿಯಾಗಿಯೂ ಸಂಸ್ಕೃತ ಸಂಬಂಧಿತ ರಾಷ್ಟ್ರೀಯ ವಿಚಾರ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಸುತ್ತಿರುವ ಡಾ. ಸುಮಾ ಅವರು ‘ಸಂಸ್ಕೃತ ಭಾರತಿ’ಯ ಜವಾಬ್ದಾರಿ ಹೊತ್ತುಕೊಂಡು ನೂರಾರು ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿದ್ದಾರೆ. ಕೊರೋನಾ ಕಾಲಘಟ್ಟದಲ್ಲಿ ಇಂಥ ಶಿಬಿರಗಳನ್ನು ಆನ್‌ಲೈನ್‌ನಲ್ಲಿ ನಡೆಸಿದ ಅವರು, ಈಗಲೂ ಆನ್‌ಲೈನ್ ಸಂಸ್ಕೃತ ಪಾಠವನ್ನು ನಿರ್ವಹಿಸುತ್ತಾ ಸಂಸ್ಕೃತವನ್ನು ಮನೆಮನೆಗೆ ತಲುಪಿಸುವಲ್ಲಿ ತಮ್ಮದೇ ಯೋಗದಾನವನ್ನು ನೀಡುತ್ತಿದ್ದಾರೆ. ಇದೀಗ ಅವರು ಬೆಳಗಾವಿ ಜಿಲ್ಲೆಯ ಕೌಜಲಗಿಯಲ್ಲಿರುವ ಬನಶಂಕರಿ ಗೋಸಂವರ್ಧನ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಸುತ್ತಿರುವ ಪತಿ ಶಿವಾನಂದರಿಗೆ ಬೆಂಬಲವಾಗಿ ನಿಂತಿದ್ದಾರೆ.