ಕಾಸರಗೋಡು : ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಇದು ಗಡಿನಾಡು ಕಾಸರಗೋಡಿನ ಹೆಮ್ಮೆಯ ಕನ್ನಡ ಪರ, ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯಾಗಿದೆ. 25ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಈ ಸಂಸ್ಥೆ ವಿಶಿಷ್ಟ ಕಾರ್ಯಕ್ರಮಗಳ ಮೂಲಕ, ಸುಮಾರು 20,000 ಪುಸ್ತಕಗಳನ್ನು ವ್ಯವಸ್ಥಿತ ರೀತಿಯಲ್ಲಿ ಹೊಂದಿಸಿ ಕನ್ನಡಿಗರಿಗೆ ಒದಗಿಸುವ ಗ್ರಂಥಾಲಯ ಹಾಗೂ ಸಾರ್ವಜನಿಕ ವಾಚನಾಲಯವು ಕಾರ್ಯ ಪ್ರವೃತ್ತಿಯಲ್ಲಿದೆ. ಕನ್ನಡ ನುಡಿ, ಸಾಹಿತ್ಯ, ಪ್ರತಿಭಾವಂತ ಸಾಧಕರು, ಹಿರಿಯ ಕನ್ನಡ ಚೇತನಗಳು, ಹಿರಿಯ ಸಮಾಜಸೇವಾ ಚೇತನಗಳು, ಶ್ರೇಷ್ಠ ಕವಿಗಳು, ಯುವ ಪ್ರತಿಭೆಗಳಿಗೆ ಸಂಸ್ಥೆಯು, ರಾಜ್ಯ, ಅಂತರ್ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಾ ಬರುತ್ತಿದೆ.
ಇದೀಗ ಕೇರಳ ರಾಜ್ಯದಿಂದ ಹೊರಗೆ ವ್ಯಾಪಕವಾಗಿ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವುದಕ್ಕಾಗಿ ಕನ್ನಡ ಭವನದ ರೂವಾರಿಗಳಾದ ಶ್ರೀ ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಟೀಚರ್ ತಮ್ಮ ಕಾರ್ಯಕಾರೀ ಸಮಿತಿಯ ಒಪ್ಪಿಗೆ ಪಡೆದು ತೀರ್ಮಾನಿಸಿದ್ದಾರೆ. ಕರ್ನಾಟಕ, ಹೊರನಾಡು, ಗಡಿನಾಡುಗಳು ಸೇರಿ ವಿದೇಶ ರಾಜ್ಯಗಳಲ್ಲಿ ತಮ್ಮ ಸಂಸ್ಥೆಯ ಸಂಚಾಲಕರನ್ನು ಆಯ್ದು, ವಿಸ್ತೃತ ರೀತಿಯಲ್ಲಿ ಕನ್ನಡ ಕಟ್ಟುವ, ಕನ್ನಡ ಕಟ್ಟಾಳುಗಳನ್ನು ಜೋಡಿಸುವ ಮತ್ತು ಕನ್ನಡ ಪರ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ, ಕಾಸರಗೋಡಿಗೆ ಆಹ್ವಾನಿಸಿ, ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶದೊಂದಿಗೆ ಪರಸ್ಪರ ಕಲೆ, ಸಂಸ್ಕೃತಿ, ಆಶಯ ವಿನಿಮಯ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ, ಪರಸ್ಪರ ಸಹಕಾರ ಈ ಎಲ್ಲಾ ತತ್ವದಡಿ ವಿಸ್ತಾರವಾದ ಕನ್ನಡಪರ ಚಿಂತನೆಯನ್ನು ಫಲಪ್ರದವಾಗಿ ಕಾರ್ಯರೂಪಕ್ಕೆ ತರುವ ಯೋಜನೆ ಇದೆ. ಈ ಮಹತ್ತರ ಕಾರ್ಯಕ್ಕೆ ಮೈಸೂರಿನ ಪ್ರಭಾವಿ ಕನ್ನಡ ಕವಿ, ಸಾಹಿತಿ ಡಾ. ತ್ಯಾಗರಾಜ್ ಮೈಸೂರು ಇವರನ್ನು ಕರ್ನಾಟಕ ರಾಜ್ಯ ಸಂಚಾಲಕರನ್ನಾಗಿ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಇವರು ಆಯ್ಕೆ ಮಾಡಿದ್ದಾರೆ.