1 ಏಪ್ರಿಲ್ 2023, ಬೆಂಗಳೂರು: ದಿನಾಂಕ 29-03-2023 ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಿರಿಯ ಸಾಹಿತಿ ಡಾ. ವೈದೇಹಿಯವರಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಜಾನಕಿ ಶ್ರೀನಿವಾಸಮೂರ್ತಿ ಎಂಬ ನಿಜ ನಾಮದೇಯದ, ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ನೀಡಿದ ಲೇಖಕಿ ಡಾ. ವೈದೇಹಿಯವರು ದ.ಕ.ಜಿಲ್ಲೆಯ ಕುಂದಾಪುರದವರು. ಕನ್ನಡ ಕಾವ್ಯ ಲೋಕಕ್ಕೆ ಹೊಸ ತಿರುವನ್ನು ಕೊಟ್ಟವರು ಇವರು. ಅವರ ಕವಿತೆಗಳು ಸೂಕ್ಷ್ಮ ಸಂವೇದನೆಗಳ ಜೊತೆಗೆ ಮಾನವತಾವಾದದ ವಿಸ್ತಾರವನ್ನು ಕನ್ನಡ ಕಾವ್ಯ ಪ್ರಪಂಚಕ್ಕೆ ನೀಡಿದವು. ಇದರೊಂದಿಗೆ ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ನೃಪತುಂಗ ಅತ್ಯಂತ ಶ್ರೇಷ್ಟ ಹಾಗೂ ಮೌಲಿಕ ಸಾಹಿತ್ಯ ಪ್ರಶಸ್ತಿ.
ಕನ್ನಡದ ಪ್ರಥಮ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ”ದ ಕರ್ತೃ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚನೆ ಮಾಡಿರುವ ಹಿರಿಯ ಸಾಹಿತಿಯೊಬ್ಬರಿಗೆ ಪ್ರತೀ ವರ್ಷ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ವೈದೇಹಿಯವರ ಅಪಾರ ಸಾಧನೆಯನ್ನು ಗುರುತಿಸಿ “ಕನ್ನಡದ ಜ್ಞಾನ ಪೀಠ”ವೆಂದೇ ಪ್ರಖ್ಯಾತವಾಗಿರುವ “ನೃಪತುಂಗ ಪ್ರಶಸ್ತಿ”ಯನ್ನು ಈ ವರ್ಷ ಡಾ. ವೈದೇಹಿಯವರಿಗೆ ನೀಡಿದೆ.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವೈದೇಹಿಯವರು, “ಇತ್ತೀಚಿನ ದಿನಗಳಲ್ಲಿ ಭಾಷೆ ಎಂಬುದು ಸೌಹಾರ್ದದ ಮಾರ್ಗವಾಗುವ ಬದಲು ದಹನದ ಉರುವಲಾಗುತ್ತಿದೆ. ಅದನ್ನು ತಡೆಯುವ ಹೊಣೆ ನಮ್ಮೆಲ್ಲರದ್ದಾಗಿದೆ. ನಮ್ಮ ದೇಶ ಕೂಡು ಕುಟುಂಬವಿದ್ದಂತೆ. ಆದರೆ ಅದನ್ನು ಈ ಹಿಂದೆಯೇ ಒಡೆಯಲಾಗಿದೆ. ಒಮ್ಮೆ ಒಡೆದು ಹೋದ ಮೇಲೆ ಮತ್ತೆ ಮತ್ತೆ ಒಂದಾಗುವುದು ಸುಲಭವಲ್ಲ, ಹಿ೦ದೆ ಉಂಟಾದ ಒಡಕು ಮತ್ತೆ ಕೂಡುವಂತಾಗಿಲ್ಲ, ಹೊತ್ತಿದ ಜ್ವಾಲೆ ಉರಿಯುತ್ತಲೇ ಇದೆ. ಅದನ್ನು ಆರಿಸುವ ಕೆಲಸ ಮಾಡದಿದ್ದರೆ ಮುಂದೆ ದೊಡ್ಡ ಅನಾಹುತವಾಗುತ್ತದೆ” ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, “ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಭಾಷೆಯ ಜತೆಗೆ ಶಿಕ್ಷಣ ಪಡೆದ ವ್ಯಕ್ತಿ, ಆತನ ವ್ಯಕ್ತಿತ್ವವೂ ಉಳಿಯುತ್ತದೆ. ಇಂಗ್ಲಿಷಿನ ಬೆರಗಿನಲ್ಲಿ ನಾವೆಲ್ಲ ಮೈ ಮರೆಯುತ್ತಿದ್ದೇವೆ. ಕನ್ನಡವನ್ನೇ ಮರೆಯುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ಸೃಜನಶೀಲತೆ ಉಳಿಯುವುದು ಮಾತೃಭಾಷೆಯಲ್ಲಿ ಮಾತ್ರ ಎಂಬುದನ್ನು ಎಲ್ಲರೂ ತಿಳಿಯಬೇಕು” ಎಂದು ಹೇಳಿದರು.
“ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ”ಯನ್ನು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡುತ್ತಿರುವ ನಲ್ವತ್ತೈದು ವರ್ಷ ವಯಸ್ಸಿನೊಳಗಿನ ಯುವ ಸಾಹಿತಿಗಳಿಗಾಗಿ ಕನ್ನಡ ನಾಡಿನ ಪ್ರಪ್ರಥಮ ರಾಜ ವಂಶ ‘ಕದಂಬ ವಂಶ’ವನ್ನು ಸ್ಥಾಪಿಸಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿದ ಮಯೂರ ವರ್ಮನ ಹೆಸರಿನಲ್ಲಿ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ”ಯನ್ನು ಪ್ರತೀವರ್ಷ ನೀಡುತ್ತಿರುವುದು ಒಂದು ವಿಶೇಷವಾಗಿದೆ. ಈ ಸಲದ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ” ಈ ಕೆಳಗಿನ ನಾಲ್ವರಿಗೆ ಸಲ್ಲುತ್ತದೆ.
ನಾಟಕಕಾರ, ನಟ, ನಿರ್ದೇಶಕ ಡಾ. ಬೇಲೂರು ರಘುನಂದನ, ಸಾಹಿತಿ ವಿದ್ಯಾರಶ್ಮಿ ಪೆಲತ್ತಡ್ಕ, ಸಾಹಿತಿ ಡಾ. ಸತ್ಯಮಂಗಲ ಮಹಾದೇವ, ಸಾಹಿತಿ ಶ್ರೀ ಹನುಮಂತ ಸೋಮನಕಟ್ಟಿ ಮತ್ತು ಸಾಹಿತಿ ಶ್ರೀ ಗುಡ್ಡಪ್ಪ ಬೆಟಗೇರಿ ಅವರಿಗೆ “ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ” ಪ್ರದಾನ ಮಾಡಲಾಯಿತು.
1 Comment
ವಾವ್! ಚೆನ್ನಾಗಿದೆ