ಮೈಸೂರು : ಹಂಪಿ ಕನ್ನಡ ವಿ.ವಿ.ಯ ಭಾಷಾಂತರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಲೇಖಕಿ ಡಾ. ಎಂ. ಉಷಾರವರಿಗೆ ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜಿನ ಡೀನ್ ಡಾ. ಶಶಿಕಲಾ ಗುರುಪುರ ಇವರು ದಿನಾಂಕ 21-07-2024ರಂದು 2024ನೇ ಸಾಲಿನ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಶಿವಮೊಗ್ಗದ ‘ಅಹರ್ನಿಶಿ ಪ್ರಕಾಶನ’ ಪ್ರಕಟಿಸಿರುವ ಉಷಾ ಅವರ ‘ಬಾಳ ಬಟ್ಟೆ’ ಕಾದಂಬರಿಯನ್ನು ‘ಸಮತಾ ಅಧ್ಯಯನ ಕೇಂದ್ರ’ವು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ರೂ.25,000/- ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಡಾ. ಶಶಿಕಲಾ ಗುರುಪುರ ಇವರು ಮಾತನಾಡಿ “ಸ್ತ್ರೀ ವಾದದ ಒಳನೋಟವನ್ನು ಸರಳವಾಗಿ, ಶಿಸ್ತುಬದ್ಧವಾಗಿ ಅಳವಡಿಸಿಕೊಂಡಿರುವವರ ಸಂಖ್ಯೆ ಕಡಿಮೆ. ಅಂತಹವರ ಸಾಲಿನಲ್ಲಿ ಡಾ. ವಿಜಯಾ ದಬ್ಬೆ ಪ್ರಮುಖರು. ದಬ್ಬೆಯವರು ಜಗತ್ತಿನ ಪ್ರಭಾವಶಾಲಿ ಸ್ತ್ರೀ ವಾದಿಗಳೊಂದಿಗೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ” ಎಂದು ಹೇಳಿದರು.
ಈ ಸಮಾರಂಭದಲ್ಲಿ ವಿಜಯಾ ದಬ್ಬೆ ಕುರಿತು ಒಡನಾಡಿಯೂ ಆದ ನಿವೃತ್ತ ಪ್ರಾಂಶುಪಾಲ ಪ್ರೊ. ಟಿ.ಎಸ್. ಸುಬ್ರಹ್ಮಣ್ಯ ಮಾತನಾಡಿ, “ಮಹಿಳಾ ಚಳವಳಿಯಲ್ಲಿ ಪುರುಷರೂ ಪಾಲ್ಗೊಳ್ಳಬೇಕೆಂದು ಪ್ರತಿಪಾದಿಸಿದ ಕವಯತ್ರಿ ಪ್ರೊ. ವಿಜಯಾ ದಬ್ಬೆಯವರ ಬಾಳು ವಿಸ್ಮಯ, ಹೆಮ್ಮೆ ಎನಿಸುತ್ತದೆ. ಕಾಲೇಜು ದಿನಗಳಲ್ಲಿ ಯಾರಿಗೂ, ಯಾವುದಕ್ಕೂ ಹೆದರುತ್ತಿರಲಿಲ್ಲ. ಅಪಾರ ಕನಸು ಮತ್ತು ನಿರಂತರ ಓದಿನೊಂದಿಗೆ ಮೌನಿಯಾಗಿದ್ದರು. ಆರ್ಥಿಕವಾಗಿ ಸದೃಢರಾಗಲು ಉದ್ಯೋಗ ಹಿಡಿಯಲು ಯತ್ನಿಸಿ, ಉದ್ಯೋಗ ಸಿಗದಿದ್ದಾಗ ಪ್ರಾಮಾಣಿಕವಾಗಿದ್ದರೆ ಸಮಾಜದಲ್ಲಿ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದರು. ಮಹಿಳೆಯರು ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆ ಪಡೆಯಬೇಕು. ಸ್ತ್ರೀವಾದಿಗಳು ಪುರುಷರ ವಿರುದ್ಧವಲ್ಲ. ಪುರುಷರ ಕೆಟ್ಟ ವ್ಯವಸ್ಥೆಯ ವಿರುದ್ಧವೆಂದು ವಿಜಯಾ ಹೇಳುತ್ತಿದ್ದರು” ಎಂದು ಸ್ಮರಿಸಿದರು.
“ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಳ್ಳೆಯ ಪ್ರಾಧ್ಯಾಪಕಿಯಾಗಿ ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡಿದ್ದರು. ನಾಗಚಂದ್ರನ ಬಗ್ಗೆ ಸಂಶೋಧನೆ ಮಾಡಿ ಪಿ.ಎಚ್.ಡಿ. ಪದವಿಯನ್ನು ಪಡೆದವರು. ಬರಹಗಾರ್ತಿ, ಹೋರಾಟಗಾರ್ತಿಯಾಗಿದ್ದ ಅವರು, ವಿದೇಶೀ ವ್ಯಕ್ತಿಯನ್ನು ಮದುವೆಯಾದರು. ಅದಕ್ಕೆ ಕುಟುಂಬದ ಸಹಕಾರ ಸಿಗದಿದ್ದಾಗ ನೊಂದುಕೊಂಡಿದ್ದರು. ಅಪಘಾತದಲ್ಲಿ ತೀವ್ರ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡರು” ‘ಮರಳಿ ಸ್ವಗ್ರಾಮ ದಬ್ಬೆಗೆ ಹೋದ ಅವರು, ಮತ್ತೆ ಅಆಇಈ ಕಲಿಯಬೇಕಾಯಿತು. ವೈದ್ಯಲೋಕವೇ ಅಚ್ಚರಿಪಡುವಂತೆ ಓದಲು, ಮಾತಾಡಲು ಶುರು ಮಾಡಿದರು. ಈ ವೇಳೆ ಹೃದಯಾಘಾತವಾಯಿತು” ಎಂದು ನೆನೆದು ಭಾವುಕರಾದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಎಂ. ಉಷಾ ಮಾತನಾಡಿ ‘ಕೆಲಸದಿಂದ ನಿವೃತ್ತಿ ಪಡೆದ ನಂತರ ಏನನ್ನಾದರೂ ಮಾಡಬೇಕು ಎಂಬ ಹುಡುಕಾಟದಲ್ಲಿದ್ದಾಗ ಆಧುನಿಕತೆಯನ್ನು ಹೆಣ್ಣು ಮಕ್ಕಳು ಹೇಗೆ ಎದುರಿಸಿದರು ಎಂಬುದರ ಕುರಿತು ಬರೆಯಲು ಆರಂಭಿಸಿದೆ. ಕಾಲೇಜಿನಲ್ಲಾಗಿದ್ದರೆ ಈ ಕುರಿತು ಪ್ರಾಜೆಕ್ಟ್ ಮಾಡುತ್ತಿದ್ದೆ. ಆದರೆ ಮನೆಯಲ್ಲಿದ್ದ ಕಾರಣ ಕಾದಂಬರಿ ರೂಪದಲ್ಲಿ ಅದನ್ನು ಹೊರತಂದೆ. ಪಾತ್ರಗಳನ್ನು ಯಥಾವತ್ತಾಗಿ ಬರೆದಿಲ್ಲ. ಅವರು ತಮ್ಮ ಕಷ್ಟವನ್ನು ದಾಟಿದ ರೀತಿಯನ್ನು ಕುರಿತು ಬರೆದಿದ್ದೇನೆ. ಇಂತಹವರು ನನ್ನ ಕಾದಂಬರಿ ಉಸಿರಾಡಲು ಕಾರಣಕರ್ತರಾಗಿದ್ದಾರೆ. ಡಾ. ವಿಜಯಾ ದಬ್ಬೆ ಅವರು ಸಮಾಜದಲ್ಲಿನ ಅಸಮಾನತೆ, ಅಸಮಾಧಾನ, ಲಿಂಗ ತಾರತಮ್ಯದ ಬಗ್ಗೆ ಸ್ಪಷ್ಟತೆ ನೀಡಿದರು. ಅವರ ಹೆಸರಿನಲ್ಲಿ ಪ್ರಶಸ್ತಿ ದೊರತಿರುವುದು ಸಂತೋಷದ ವಿಷಯ” ಎಂದು ಹೇಳಿದರು.
ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿದ್ದ ಕನ್ನಡ ಸಹ ಪ್ರಾಧ್ಯಾಪಕ ಪ್ರೊ. ಆನಂದ್ ಗೋಪಾಲ್ ಕಾವ್ಯದ ಕುರಿತು ಹಾಗೂ ಪ್ರೊ. ಆರ್.ಎಸ್. ಅಶ್ವಿನಿ ಪ್ರಬಂಧಗಳ ಕುರಿತು ಮಾತನಾಡಿದರು. ‘ಸಮತಾ ಅಧ್ಯಯನ ಕೇಂದ್ರದ ಧರ್ಮದರ್ಶಿ ಡಾ. ರಾಮಕೃಷ್ಣ ಜೋಷಿ ಆಶಯ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ಬಿ.ಸಿ. ಮಂಜುಳಾ, ಕಾರ್ಯದರ್ಶಿ ಆರ್ತ. ಸುನಂದಮ್ಮ, ಸಹ ಕಾರ್ಯದರ್ಶಿ ಪಿ. ಓಂಕಾರ್, ಖಜಾಂಚಿ ವಿಜಯಾರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾವ್ಯ ಸ್ಪರ್ಧೆಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೈ.ಎಸ್. ಅಭಿಷೇಕ್ (ಪ್ರಥಮ), ದಾವಣಗೆರೆ ವಿಶ್ವವಿದ್ಯಾಲಯದ ಕೆ. ರುಜ್ವಾನ (ದ್ವಿತೀಯ), ಅಮಿತಾ ಎಂ. ಕುಡಚೆ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಕಾಸರಗೋಡು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆರ್. ನವ್ಯಾ (ಪ್ರಥಮ), ಕೊಡಗಿನ ಕೆ.ಎಸ್. ಮುಸ್ತಫಾ (ದ್ವಿತೀಯ), ಮಂಗಳೂರು ವಿಶ್ವವಿದ್ಯಾಲಯದ ಎಸ್. ಸಂಧ್ಯಾ (ತೃತೀಯ) ಬಹುಮಾನ ಸ್ವೀಕರಿಸಿದರು. ತೀರ್ಪುಗಾರರ ಮೆಚ್ಚುಗೆ ಪಡೆದ ಕವಿಗಳು, ಪ್ರಬಂಧ ಲೇಖಕರನ್ನು ಸನ್ಮಾನಿಸಲಾಯಿತು.
‘ಬಾಳ ಬಟ್ಟೆ’ ಕಾದಂಬರಿ ಬಗ್ಗೆ :
ಡಾ. ಎಂ. ಉಷಾ ಅವರು ಬಾಳಬಟ್ಟೆ ಕಾದಂಬರಿಯಲ್ಲಿ ಚಾಮರಾಜನಗರ ಸೀಮೆಯ ಕಥೆ ಹೇಳಿದ್ದಾರೆ. ಆ ಪ್ರದೇಶದಲ್ಲಿ 1925ರಿಂದ 1965ರ ಕಾಲದ ಮಿತಿಯಲ್ಲಿ ಬದುಕಿದ ಮಧ್ಯಮ ಮತ್ತು ಮೇಲು ಜಾತಿಗಳ ಸಮುದಾಯದ ಮೂರು ತಲೆಮಾರುಗಳ ಕಥೆ ಇಲ್ಲಿ ನೇಯ್ಗೆಗೊಂಡಿದೆ. ಗತಕಾಲದ ಬದುಕನ್ನು ಹೆಣ್ಣು ಪಾತ್ರಗಳ ನೋಟದ ಮೂಲಕ ಚಿತ್ರಿಸಿರುವುದು ಕೃತಿಯ ಹೆಚ್ಚುಗಾರಿಕೆ. ವ್ಯಕ್ತಿ, ಮನೆ, ಊರು, ಸಮಾಜ, ಲೋಕ ಹೀಗೆ ಕನಸಿನ ವಿಸ್ತಾರ ಹಿಗ್ಗುತ್ತದೆ. ದೈನಿಕ ಬದುಕಿನ ವಿವರಗಳು ಮತ್ತು ಕೌಟುಂಬಿಕ ಸಂಬಂಧಗಳ ಪ್ರೀತಿ, ತೊಡಕುಗಳ ಮೂಲಕವೇ ವಿವಿಧ ಪಾತ್ರಗಳ ಮಾನಸಿಕ ಲೋಕವನ್ನೂ, ಹೊರಲೋಕದ ಬದಲಾವಣೆಗಳನ್ನೂ ಹಿಡಿದಿಡಲು ಪ್ರಯತ್ನಿಸಿದೆ. ಈಗ ಕನ್ನಡದಿಂದ ಕಣ್ಮರೆಯಾಗುತ್ತಿರುವ ಎಷ್ಟೋ ಶಬ್ದ, ನುಡಿಗಟ್ಟುಗಳ ಬಳಕೆ ಕಾದಂಬರಿಯ ರುಚಿಯನ್ನು ಹೆಚ್ಚಿಸಿವೆ.