ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ದ ‘ರಂಗಪಂಚಮಿ-2024’ ಐದು ದಿನಗಳ ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 05-03-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಖ್ಯಾತ ರಂಗ ನಿರ್ದೇಶಕ ಡಾ. ಜೀವನ್‌ರಾಂ ಸುಳ್ಯ “ಅಭಿವೃದ್ಧಿಯ ನೆಪದಲ್ಲಿ ಜಲ, ವಾಯು, ಭೂಮಿಯ ಮೇಲೆ ಜನರು ಪ್ರಹಾರ ಮಾಡುತ್ತಿದ್ದು, ಆ ಮೂಲಕ ನಮ್ಮೊಳಗಿನ ಸಂಬಂಧಗಳು ಬೇರ್ಪಡುತ್ತಾ ಹೋಗುತ್ತಿದೆ. ಆದರೆ ರಂಗಭೂಮಿಯ ಮೂಲಕ ‘ಲಾವಣ್ಯ’ವು ಸಂಬಂಧವನ್ನು ಗಟ್ಟಿಮಾಡುವ ಪ್ರಯತ್ನ ಮಾಡುತ್ತಿದೆ. ಕಲಾವಿದರು ದೇಶದ ಸಾಂಸ್ಕೃತಿಕ ಸ್ವತ್ತಾಗಿದ್ದು, ಒಂದು ಊರಿನಲ್ಲಿ ಕಲಾವಿದರ ಸಂಖ್ಯೆ ಗರಿಷ್ಠವಾಗಿದ್ದರೆ ಅದು ಶ್ರೀಮಂತವಾದ ಊರಾಗಿರುತ್ತದೆ. ಕಳೆದ 46 ವರ್ಷಗಳಿಂದ ಹಲವು ತ್ರಾಸದಾಯಕ ಪರಿಸ್ಥಿತಿಯನ್ನು ಎದುರಿಸಿಯೂ, ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ” ಎಂದು ಶ್ಲಾಘಿಸಿದರು.
‘ಲಾವಣ್ಯ’ದ ಹಿರಿಯ ಸದಸ್ಯ ಸದಾಶಿವ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆ ಸೇವಕ ಶಂಕರ ನಾಯ್ಕ್ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ವಿಜಯಲಕ್ಷ್ಮೀ ಮೆಟ್ಟಿನಹೊಳೆ ಇವರನ್ನು ಸನ್ಮಾನಿಸಲಾಯಿತು. ಉದ್ಯಮಿ ನಾಕಟ್ಟೆ ಜಗನ್ನಾಥ ಶೆಟ್ಟಿ, ಉಪ್ಪುಂದ ಜೆಸಿಐ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಯು.ಬಿ.ಎಸ್. ಅಂಗ್ಲಮಾಧ್ಯಮ ಶಾಲಾ ಪ್ರತಿನಿಧಿ ಪ್ರೇಮಾ ವಿನಾಯಕ ಶೆಟ್ಟಿ ಉಪಸ್ಥಿತರಿದ್ದರು. ‘ಲಾವಣ್ಯ’ದ ನಿಕಟಪೂರ್ವಾಧ್ಯಕ್ಷ ಹರೇಗೋಡು ಉದಯ್ ಅಚಾರ್ಯ ಸ್ವಾಗತಿಸಿ, ಎಸ್. ಗಣಪತಿ ನಿರೂಪಿಸಿ, ರೋಶನ್ ವಂದಿಸಿದರು. ನಂತರ ಮೂಡಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ‘ನಾಯಿಮರಿ’ ನಾಟಕ ಪ್ರದರ್ಶಿಸಿದರು.