ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ ‘ರಜಾರಂಗು-24’ ಶಿಬಿರದಲ್ಲಿ ಮಕ್ಕಳ ನಾಟಕೋತ್ಸವದ ಎರಡನೇಯ ದಿನದ ಕಾರ್ಯಕ್ರಮವು ದಿನಾಂಕ 07-05-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ನಿರ್ದೇಶಕರಾದ ನಾಗೇಶ್ ಕೆದೂರು ಅವರನ್ನು ಅಭಿವಂದಿಸಿ ಮಾತನಾಡಿದ ಪ್ರಸಿದ್ಧ ಸಾಹಿತಿ ಸುಧಾ ಆಡುಕುಳ “ಸಾಂಸ್ಕೃತಿಕ ಚಟುವಟಿಕೆಗಳು ಜೀವಂತವಾಗಿದ್ದರೆ ಆ ಊರನ್ನು ಹೊರಗಿನವರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸುತ್ತಾರೆ. ತೆಕ್ಕಟ್ಟೆಯ ಸಾಂಸ್ಕೃತಿಕ ಕಾರ್ಯಕ್ರಮದ ಸುದ್ದಿಗಳು ಇತ್ತೀಚಿಗೆ ಬಹಳವಾಗಿ ಪತ್ರಿಕೆಗಳಲ್ಲಿ ಬರುತ್ತಿವೆ. ಕಲಾವಿದರ ಬಳಗವೇ ಇಲ್ಲಿಯ ಕೇಂದ್ರಗಳಲ್ಲಿ ಸೃಷ್ಠಿಯಾಗುತ್ತಿದೆ. ಮನಸ್ಸುಗಳನ್ನು ಮತ್ತು ಸಾಂಸ್ಕೃತಿಕ ರೂಪಗಳನ್ನು ಒಟ್ಟು ಗೂಡಿಸಿ ಹೊಲಿಯುವ ಕಾರ್ಯ ತೆಕ್ಕಟ್ಟೆಯ ಸಂಸ್ಥೆಗಳದ್ದಾಗುತ್ತಿದೆ. ಮಕ್ಕಳ ಶಿಬಿರಗಳನ್ನು ನೆರವೇರಿಸುವುದು ಸುಲಭದ ಕೆಲಸವಲ್ಲ. ದಶವಾರ್ಷಿಕವಾದ ಬೆಳೆಗಾಗಿ ನಿರೀಕ್ಷಿಸುತ್ತಿರುವ ಕೆಲಸವಾಗಿದೆ. ಮುಂದೊಂದು ದಿನ ಚಿತ್ರಕಾರನಾಗಬೇಕು, ಡಾಕ್ಟರ್ ಆಗಬೇಕು, ಕಲಾವಿದನಾಗಬೇಕು ಎಂದು ನಿರ್ಣಯವನ್ನು ತೆಗೆದುಕೊಳ್ಳುವ ತೀರ್ಮಾನ ಶಿಬಿರದಲ್ಲಿ ಆಗುತ್ತದೆ.” ಎಂದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದಯ್ ಕುಮಾರ್ ಶೆಟ್ಟಿ ಮಾತನಾಡಿ “ಕರಾವಳಿಯ ಸಾಂಸ್ಕೃತಿಕ ಸಿರಿವಂತಿಕೆಗೆ ತೆಕ್ಕಟ್ಟೆಯ ಸಂಸ್ಥೆಗಳ ಕೊಡುಗೆ ದಿನೇ ದಿನೇ ಹೆಚ್ಚಾಗುತ್ತಿದೆ. ರಂಗ ಚಟುವಟಿಕೆಯ ಪೂರ್ವದಲ್ಲಿ ಸಭೆಯ ಮಾತು ಗದ್ದಲವಾಗದಿರುವಂತೆ ಕಾಳಜಿ ವಹಿಸಬೇಕು. ಬೇಸಿಗೆ ಶಿಬಿರದ ಮೂಲಕ ರಂಗಭೂಮಿಯನ್ನೊಳಗೊಳ್ಳುವುದು ನಮ್ಮಲ್ಲಿನ ಮಾನವೀಯ ಗುಣಗಳನ್ನು ಉದ್ದೀಪನಗೊಳಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ.” ಎಂದರು.
ಕೈಲಾಸ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊಯಿಕೂರು, ರಂಗಕರ್ಮಿ ಪುನೀತ್ ಶೆಟ್ಟಿ ಕೋಟ, ಶ್ರೀಮತಿ ವಾರಿಜಾ ಸುಭಾಸ್ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಉಪಸ್ಥಿತರಿದ್ದರು. ರಂಗ ನಿರ್ದೇಶಕರಾದ ಸುಧಾ ಕದ್ರಿಕಟ್ಟು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಗಜಾನನ ಶರ್ಮ ರಚನೆಯ ‘ಚೆನ್ನಭೈರಾದೇವಿ’ ನಾಟಕ ನಾಗೇಶ್ ಕೆದೂರು ನಿರ್ದೇಶನದಲ್ಲಿ ಶಿಬಿರದ ವಿದ್ಯಾರ್ಥಿಗಳಿಂದ ರಂಗ ಸಂಪನ್ನಗೊಂಡಿತು.