ತೆಕ್ಕಟ್ಟೆ: ‘ಶ್ವೇತಸಂಜೆ-25’ ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಕ್ರಿಯೇಷನ್ಸ್ ಜೋತೆಯಾಗಿ ಆಯೋಜಿಸಿಕೊಂಡಿರುವ ‘ರಜಾರಂಗು-24’ ಶಿಬಿರದಲ್ಲಿ “ತ್ರಿವಳಿ ನಾಟಕೋತ್ಸವ”ವು ದಿನಾಂಕ 06-05-2024 ರಂದು ನಡೆಯಿತು.
ತ್ರಿವಳಿ ನಾಟಕೋತ್ಸವನ್ನು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಸಮಾಜವನ್ನು ಬೆಸೆಯುವ ಶಕ್ತಿ ರಂಗಭೂಮಿಗಿದೆ. ಬದುಕು ಕೃತವಾಗಿರಬಾರದು, ಸಹಜವಾಗಿರಬೇಕು. ಮರದಿಂದ ಮಾವಿನ ಹಣ್ಣನ್ನು ನಾವು ತಿನ್ನುವುದಿಲ್ಲ. ಮಾವು ಬೆಳೆಯುವ ಮುಂಚೆಯೇ ಬೆಳೆಯುವಂತೆ ಮಾಡಿ ತಿನ್ನುತ್ತೇವೆ. ಇದು ಕೃತಕತೆ. ಹರಿಯುವ ನೀರನ್ನು ಕಟ್ಟಿ ಬಳಸುವುದು ಕೃತಕತೆ. ಹಾಗೆಯೇ ರಂಗಭೂಮಿಯಲ್ಲೂ ಕೃತಕತೆ ಸುಳಿಯದಿರಲಿ. ವೇಷಭೂಷಣದಿಂದ ಹಿಡಿದು, ಭಾಷೆಯ ತನಕ ಸಹಜತೆಯನ್ನು ಕಂಡುಕೊಳ್ಳಲಿ. ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶಿಬಿರ ಸಹಕಾರಿಯಾಗಲಿ.” ಎಂದರು.
‘ಲಂಬಕರ್ಣಣ ಉಷ್ಣೀಷ’ ನಾಟಕ ನಿರ್ದೇಶಕರಾದ ರಂಜಿತ್ ಶೆಟ್ಟಿ ಕುಕ್ಕುಡೆಯವರನ್ನು ಅಭಿನಂದಿಸಿ ಮಾತನ್ನಾಡಿದ ರಂಗ ನಿರ್ದೇಶಕ ಸದಾನಂದ ಬೈಂದೂರು “ರಂಗಭೂಮಿ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಹಳ ದೊಡ್ಡ ಕ್ರಾಂತಿಯನ್ನು ಮೂಡಿಸಿದೆ. ಹಲವಾರು ಸಂಘ ಸಂಸ್ಥೆಗಳು ರಂಗಭೂಮಿಯ ಕಡೆಗೆ ಒಲವು ತೋರುತ್ತಿದ್ದಾರೆ. ಬಹು
ಕ್ಲಿಷ್ಟವಾದ ರಂಗಭೂಮಿಯ ಚಟುವಟಿಕೆಗಳು ಕರಾವಳಿ ಭಾಗದ ಜನರ ಎದೆಯ ಕದ ತಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ತೆಕ್ಕಟ್ಟೆಯಲ್ಲಿ ರಂಗಭೂಮಿಯ ಬಿಸಿ ಕಾವೇರಿದೆ. ಬ್ರಹ್ಮಾವರದ ರಂಜಿತ್ ಶೆಟ್ಟಿ ರಂಗ ಭೂಮಿಗೆ ಕಾಲಿಟ್ಟು ಬೆಳೆಯುತ್ತಿರುವ ಹುಡುಗ. ಪ್ರತೀ ನವ ನಿರ್ದೇಶಕರಲ್ಲೂ ರಂಗ ಕ್ರಾಂತಿ ಇಮ್ಮಡಿಯಾಗಲಿ.” ಎಂದು ಹಾರೈಸಿದರು.
ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗುರು ಲಂಬೋದರ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪವನ್ ಆಚಾರ್ ಸ್ವಾಗತಿಸಿ, ಮನೀಶ್ ಕುಂದಾಪುರ ನಿರೂಪಿಸಿ, ರಚಿತ್ ಶೆಟ್ಟಿ ಧನ್ಯವಾದಗೈದರು. ಬಳಿಕ ರಂಗ ಗೀತೆ ಹಾಗೂ ಲೀಲಾ ಗರಡಿ ರಚನೆಯ ‘ಲಂಬಕರ್ಣಣ ಉಷ್ಣೀಷ’ ರಂಗದಲ್ಲಿ ಪ್ರಸ್ತುತಿಗೊಂಡಿತು.