ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಆಯೋಜಿಸಿದ್ದ ‘ತಿಂಗಳ ನಾಟಕ ಸಂಭ್ರಮ’ದಲ್ಲಿ ಬೊಳುವಾರು ಮುಹಮ್ಮದ್ ಕುಂಞ ಅವರ ಕೃತಿಯಾಧಾರಿತ ‘ಸ್ವಾತಂತ್ರ್ಯದ ಓಟ’ ಎಂಬ ನಾಟಕ ಪ್ರದರ್ಶನವು ದಿನಾಂಕ 19 ಜುಲೈ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ “ದೇಶ ಒಂದು ರೀತಿಯ ನೈತಿಕತೆ ಕಳೆದುಕೊಂಡು, ಏಕಮುಖಿ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಸಂದರ್ಭದಲ್ಲಿ ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸಿದಂತಹ ಗಾಂಧೀಜಿಯವರ ಆದರ್ಶಗಳು ನಮಗೆಲ್ಲರಿಗೂ ಅಗತ್ಯವಾಗಿದೆ. ಇಡೀ ದೇಶದಲ್ಲಿ ಬೆಳೆಯುತ್ತಿರುವ ಏಕಮುಖ ಸಂಸ್ಕೃತಿಯನ್ನು ವಿರೋಧಿಸಬೇಕಾಗಿದೆ. ಸುಳ್ಳೇ ದೇಶವನ್ನು ರಾರಾಜಿಸುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಪ್ರತಿಪಾದಿಸಿದಂತಹ ಗಾಂಧೀಜಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಎಂದಿಗೂ ಸತ್ಯಕ್ಕೆ ಜಯ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಬಹುಶಃ ರಾಜ್ಯದಲ್ಲಿ ಎಲ್ಲರ ಸಾಹಿತ್ಯ ಪ್ರಿಯರಿಗೆ ಬೊಳುವಾರು ಮುಹಮ್ಮದ್ ಕುಂಞಯವರು ಪರಿಚಿತರೇ ಆಗಿದ್ದಾರೆ. ಗಾಂಧೀಜಿ ಎಲ್ಲರಿಗಿಂತಲೂ ಅತ್ಯಂತ ಪ್ರಸ್ತುತವಾಗುತ್ತಿದ್ದಾರೆ. ಹಾಗಾಗಿ ‘ಸ್ವಾತಂತ್ರ್ಯದ ಓಟ’ ನಾಟಕದ ಮೂಲಕ ಗಾಂಧೀಜಿಯ ಕನಸುಗಳು ಏನಿತ್ತು ಎನ್ನುವುದನ್ನು ನಾಟಕದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿ ಚಿಂತನೆಗಳು ಹೇಗಿತ್ತು ಎನ್ನುವುದನ್ನು ನಾಟಕದ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ” ಎಂದು ತಿಳಿಸಿದರು.
ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ, ಜಗದೀಶ್ ಜಾಲಾ, ಟಿ.ಎಚ್. ಲವಕುಮಾರ್, ಜಿಪಿಒ ಚಂದ್ರು, ಚನ್ನಪ್ಪ ಕಟ್ಟಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಿರಿಗೆರೆಯ ತರಳಬಾಳು ಕಲಾ ಸಂಘದ ಕಲಾವಿದರಿಂದ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನಗೊಂಡಿತು.