ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಿದ ‘ಅವಳ ಕಾಗದ’
ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ರೂಪಕ.
ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ ಪ್ರಕಟಿಸಿದವರು ರವೀಂದ್ರನಾಥ ಠಾಕೂರರು. ಅವಳ ಕಾಗದದ ಮೂಲಕ ಅದನ್ನು ರೂಪಕವಾಗಿಸಿದ ಶ್ರೇಯಸ್ಸು ಸುಧಾ ಅಡುಕಳ ಅವರದಾದರೆ, ಅದನ್ನು ನಿರ್ದೇಶಿಸಿದ ಶ್ರೇಯಸ್ಸು ಡಾ.ಶ್ರೀಪಾದ ಭಟ್ಟರಿಗೆ ಸಲ್ಲಬೇಕು. ಅದನ್ನು ಅನನ್ಯವಾಗಿ ತನ್ನ ಭಾವಾಭಿನಯದ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದವರು ಮುಂಬಯಿನ ನನ್ನ ಕನ್ನಡದ ಶಿಷ್ಯೆ ಅಹಲ್ಯಾ ಬಲ್ಲಾಳ್ ಅನುಪಮ ಕಲಾವಿದೆ.
“ಗಾಳಿಯಲ್ಲಿ ಹಾರಿಬಂದ ಬೀಜಗಳು, ಕಲ್ಲಿನ ಬಿರುಕುಗಳಲ್ಲಿ ಬಿದ್ದು, ಅವು ಚಿಗುರೊಡೆದಾಗಲೇ ಬಿರುಕು ಇದೆ ಎಂದು ಗೊತ್ತಾಗುವುದು” ಎಂಬ ಮಾತುಗಳು, ಅವಳ ಎದೆಯಲ್ಲಿ ಎದ್ದ ಬಿರುಗಾಳಿಯ ಸೂಚಕವಾಗಿವೆ. ಆಗ ಅವಳು ಎದುರಿಸಿದ ತಲ್ಲಣಗಳು, ಅವಳನ್ನು ಅವರ ಮನೆಯವರು ಎಸಗಿದ ದೌರ್ಜನ್ಯದ ವಿರುದ್ದ “ನಾನು ಕೋರ್ಟಿಗೆ ಹೋಗುತ್ತೇನೆ” ಎಂದು ಘೋಷಿಸಿ ಮನೆ ತೊರೆದು ಹೋಗುವಂತೆ ಮಾಡುತ್ತದೆ. ಈ ಬೆಂಗಾಲಿ ಹೆಣ್ಣು. ಎಚ್ಚೆತ್ತ ಸ್ರ್ರೀಪ್ರಜ್ಞೆಯ ದ್ಯೋತಕವಾಗಿ ಕಾಣಿಸಿಕೊಳ್ಳುತ್ತಳೆ. ಇದು ಡಾಲ್ಸ್ ಹೌಸ್ ನ ನಾಯಕಿ ನೋರಾಳ ನಡೆಯನ್ನು ನೆನಪಿಗೆ ತರುವಷ್ಟು ಪರಿಣಾಮಕಾರಿಯಾಗಿದೆ. ಇದನ್ನು ಆಯೋಜಿಸಿದ ಮುಂಬಯಿ ನಮ್ಮ ಗೆಳತಿ ಈಗ ಇಲ್ಲಿ ನೆಲೆಸಿರುವ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ರಿಗೆ ಕೂಡ ಅಭಿನಂದನೆ. ಈ ಬೆಂಗಳೂರಿನ ರಂಗಾಸಕ್ತರಿಗೆ ನನ್ನ ಶಿಷ್ಯೆ ಅಹಲ್ಯ ಬಲ್ಲಾಳರನ್ನು ಪರಿಚಯಿಸಿದ ಶ್ರೇಯಸ್ಸು ಅವರದು.
ಎರಡು ದಶಕಗಳಿಗೂ ಹಿಂದೆ ಮು.ವಿ.ವಿ.ಕನ್ನಡ ಎಂ.ಎ. ತರಗತಿಗಳಲ್ಲಿ ಗಮನವಿಟ್ಟು ನನ್ನ ಪಾಠ ಕೇಳುತ್ತಿದ್ದ ಅಹಲ್ಯಾರ ಚಿತ್ರ ನನ್ನ ಮುಂದೆ ಬರುತ್ತದೆ. ಅವರಲ್ಲಿ ಇಂತಹ ಒಬ್ಬ ಕಲಾವಿದೆ ಇರಬಹುದು ಎಂಬ ಊಹೆಯೇ ನನಗಿರಲಿಲ್ಲ. ಈಗ ಬಹುಮುಖಿ ಪ್ರತಿಭಾವಂತ ಕಲಾವಿದೆಯಾಗಿ ಬೆಳೆದು ನಿಂತಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆಯ ಸಂಗತಿ. ಅವರ ಪ್ರತಿಭೆ ನಿರಂತರವಾಗಿ ಬೆಳಗುತ್ತಿರಲಿ ಎಂದು ಈ ಸಂದರ್ಭದಲ್ಲಿ ಹಾರೈಸುವೆ.
- ರಘುನಾಥ್ ಕೃಷ್ಣಮಾಚಾರ್