ನಾಟಕದ ಶೀರ್ಷಿಕೆಯೇ ಅತ್ಯಂತ ಮನಮೋಹಕ. ಮನಸೂರೆಗೊಂಡ ಕಾವ್ಯಾತ್ಮಕ ಪ್ರಸ್ತುತಿ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಹು ಲವಲವಿಕೆಯಿಂದ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ ಸುಮನೋಹರ ರಂಗಪ್ರಸ್ತುತಿ ನೋಡುಗರನ್ನು ಬಹು ಆಸಕ್ತಿಯಿಂದ ಸೆಳೆದೊಯ್ದ ಕುತೂಹಲಭರಿತ ನಾಟಕ.
ನಾಡೋಜ ಡಾ. ಹಂಪನಾ ವಿರಚಿತ ಈಗಾಗಲೇ 16 ಭಾಷೆಗಳಿಗೆ ಅನುವಾದಗೊಂಡಿರುವ ‘ಚಾರುವಸಂತ’ ವಿಶಿಷ್ಟ ದೇಸೀಕಾವ್ಯವನ್ನು ಆಧರಿಸಿದ ರಂಗರೂಪವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದವರು ಡಾ.ನಾ. ದಾಮೋದರ ಶೆಟ್ಟಿ. ಕುತೂಹಲ ಕೆರಳಿಸುವ ಆಸಕ್ತಿಕರ ಘಟನೆಗಳಿಂದ ಕೂಡಿದ ನಾಟಕದ ದೃಶ್ಯಗಳಿಗೆ ಜೀವಸ್ಪರ್ಶ ನೀಡಿ ರಮ್ಯ ವಿನ್ಯಾಸದೊಂದಿಗೆ ಹರಿತವಾಗಿ ನಿರ್ದೇಶಿಸಿದವರು ಡಾ. ಜೀವನ್ ರಾಮ್ ಸುಳ್ಯ. ತಮ್ಮ ಕಾರ್ಯಕ್ಷಮತೆಗಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಇವರು ತಮ್ಮ ಸಿರಿಕಂಠದ ಇಂಪಾದ ಗಾಯನದಿಂದ ನಾಟಕದ ನಡೆಯನ್ನು ಮಧುರವಾಗಿಸಿದರು.
ಇಂದಿನ ಸಮಾಜಕ್ಕೂ ಪ್ರಸ್ತುತವಾದ ಹಲವಾರು ಸಮಸ್ಯೆಗಳಿಗೆ ದನಿಯಾದ ನಾಟಕದಲ್ಲಿ ಗೌರವಸ್ಥ ಸಿರಿವಂತ ವೈಶ್ಯ ಮನೆತನದ ಚಾರುದತ್ತ, ಸುರಸುಂದರಿ ವೇಶ್ಯೆ ವಸಂತ ತಿಲಕೆಯಲ್ಲಿ ಅನುರಕ್ತನಾಗಿ ತಂದೆ-ತಾಯಿ, ಹೆಂಡತಿಯನ್ನು ಮರೆತು ಮನೆತನದ ಕೀರ್ತಿಯನ್ನು ಹಾಳುಮಾಡಿದ್ದಲ್ಲದೆ ನಿರ್ಗತಿಕನಾಗುತ್ತಾನೆ. ಸಾಧ್ವಿ ಪತ್ನಿಯ ಹೃದಯವೈಶಾಲ್ಯದಿಂದ, ಅವನ ಪ್ರಾಣವಲ್ಲಭೆ ವಸಂತ ತಿಲಕೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದಲ್ಲದೆ, ತಾನು ಕಳೆದುಕೊಂಡ ಧನ-ಕನಕ ಎಲ್ಲವನ್ನೂ ಮರಳಿ ಸಂಪಾದಿಸುವ ಆಶಯದಿಂದ ದೇಶ-ವಿದೇಶಗಳಲ್ಲಿ ಸಂಚರಿಸಿ, ಕಷ್ಟಪಟ್ಟು ವ್ಯಾಪಾರ ಮಾಡಿ ಮರಳಿ ವಣಿಕಶ್ರೇಷ್ಠನಾಗುತ್ತಾನೆ. ಈ ಪಯಣದಲ್ಲಿ ಅವನು ಅನೇಕ ಕಷ್ಟ ಪರಂಪರೆಗೆ ಸಿಲುಕಿ, ಅನೇಕ ವಿಪತ್ತಿನ ಅನುಭವಗಳಿಂದ ಪಕ್ವವಾಗಿ ಸಾಹಸ ಮಾಡಿ ಚಂಪಾನಗರಕ್ಕೆ ಹಿಂತಿರುಗಿರುತ್ತಾನೆ. ಅವನು ತನ್ನ ಬದುಕನ್ನೊಮ್ಮೆ ಹಿಂತಿರುಗಿ ನೋಡಿದಾಗ ಮನಸ್ಸಿಗೆ ತುಂಬಾ ಖೇದವೆನಿಸಿ, ಕ್ಷಣಭಂಗುರ ಆಮಿಷ-ಸುಖಗಳಿಗೆ ಈಡಾಗಿ ತುಳಿದ ಅಧರ್ಮದ ಹಾದಿ, ಧನಾಪೇಕ್ಷೆ ತೋರಿದ ದುರಾಸೆ-ಹಿಂಸೆಯ ಘಟನೆಗಳು, ಮೂಢನಂಬಿಕೆಯ ದರ್ಶನದಿಂದ ಪರಿಪಕ್ವಗೊಂಡ ಚಾರುದತ್ತನ ಮನಸ್ಸು ಐಹಿಕ ಲಾಲಸೆಗಳಿಂದ ವಿಮುಖವಾಗಿ ಎಲ್ಲವನ್ನೂ ಪರಿತ್ಯಜಿಸಿ ಆಧ್ಯಾತ್ಮಿಕ ಸಾಧನೆಗಾಗಿ ತಪೋವನಕ್ಕೆ ತೆರಳುವ ಘಟನೆಯೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ.
ಮಕ್ಕಳಿಲ್ಲವೆಂದು ಕೊರಗುವ ಸಿರಿವಂತ ವೈಶ್ಯಶ್ರೇಷ್ಠ ಭಾನುದತ್ತ-ದೇವಿಲೆಯರು ಸನ್ಯಾಸಿಯ ಆಶೀರ್ವಾದದಿಂದ ‘ಚಾರುದತ್ತ’ನನ್ನು ಮಗನಾಗಿ ಪಡೆದು ಧನ್ಯತೆಯನ್ನು ಅನುಭವಿಸುವ ಸಂತಸದ ದಿನಗಳು ಒಂದು ಘಟ್ಟವಾದರೆ, ಸದಾ ಅಧ್ಯಯನ ನಿರತ ಸಜ್ಜನ ವಿವಾಹಿತ ಚಾರುದತ್ತ ವೈಶ್ಯೆಯ ಸಂಗ ಮಾಡಿ ತನ್ನ ಬಾಳು ಹಾಳು ಮಾಡಿಕೊಳ್ಳುವುದು ಇನ್ನೊಂದು ಘಟ್ಟವಾದರೆ ಮೂರನೆಯ ಹಂತದಲ್ಲಿ ಧನದಾಹಿ ಹೆಂಗಸಿನಿಂದ ಚಾರುದತ್ತ ತನ್ನ ಪ್ರೇಮಿಯನ್ನು ಜೊತೆಗೆ ಆಸರೆಯನ್ನೂ ಕಳೆದುಕೊಂಡು ಬೀದಿಪಾಲಾದರೂ ಮರಳಿ ತನ್ನವರನ್ನು ಸೇರಿಕೊಂಡು ನೆಮ್ಮದಿ ಕಾಣುವಲ್ಲಿ ಕಥೆ ಸುಖಾಂತ್ಯ ಎಂಬ ನೋಡುಗನ ನಿರೀಕ್ಷೆ ಹುಸಿಯಾಗುತ್ತದೆ. ಜೈನಧರ್ಮದ ತತ್ವಕ್ಕನುಗುಣ ಅವನು ಸರ್ವ ಸಂಗ ಪರಿತ್ಯಾಗಿಯಾಗುವುದಕ್ಕೆ ನಿಮಿತ್ತದಂತೆ ಅವನ ಬಾಳಿನಲ್ಲಿ ಮುಂದೆ ಅನೇಕ ಕಷ್ಟತಮ ಘಟನೆಗಳು ಸಂಭವಿಸಿ, ಕಡೆಯಲ್ಲಿ ಎಲ್ಲವೂ ಕೈಗೆಟುಕುವಷ್ಟರಲ್ಲಿ ಮನಸ್ಸು ಮಾಗಿ, ವೈರಾಗ್ಯ ಮೂಡುವ ಅನಿರೀಕ್ಷಿತ ಅಂತ್ಯ ಹೃದಯಸ್ಪರ್ಶಿಯಾಗಿದೆ.
ಶೃಂಗಾರ- ಸಾಹಸ, ತ್ಯಾಗ-ಭೋಗ ಸಮನ್ವಯದ ಸುಂದರ ಚಿತ್ರಣಗಳಿಂದ ಕೂಡಿದ ನಾಟಕ ಪರಿಣಾಮಕಾರಿಯಾಗಿದೆ. ರಮ್ಯಾದ್ಭುತಗಳಿಂದ ಸಾಗುವ ನಾಟಕದ ಎಲ್ಲ ಕಲಾವಿದರ ಸೊಗಸಾದ, ಹದವಾದ ಅಭಿನಯ, ಗುಂಪುಗಳ ಸಾಮರಸ್ಯ, ನಾಟಕದ ಒಪ್ಪ-ಓರಣ ಗಮನಾರ್ಹವಾಗಿತ್ತು. ಪಾತ್ರಗಳಿಗೆ ತಕ್ಕಂತೆ ಇದ್ದ ವಸ್ತ್ರವಿನ್ಯಾಸ, ವೇಷಭೂಷಣದ ಸೂಕ್ಷ್ಮತೆ ನಾಟಕದ ಪರಿಣಾಮವನ್ನು ಹೆಚ್ಚಿಸಿತ್ತು. ನಾಟಕವನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಾಂಕೇತಿಕ ರಂಗಸಜ್ಜಿಕೆ-ಪರಿಕರಗಳು ಕಣ್ಮಿಂಚು ಕಣ್ಮಾಯದಲ್ಲಿ ದೃಶ್ಯಗಳು ಬದಲಾಗುತ್ತಿದ್ದುದು ಅಚ್ಚರಿಯನ್ನು ಹುಟ್ಟಿಸುವಂತ್ತಿದ್ದವು. ಪರಿಪೂರ್ಣ ಬೆಳಕಿನ ಸಂಯೋಜನೆ-ನಿರ್ವಹಣೆ, ಸಹನಟರ ಪೂರಕ ಅಭಿನಯ, ಯಕ್ಷಗಾನದ ಕುಣಿತದ ಚಲನೆಗಳು, ವಿನ್ಯಾಸ, ಧ್ವನಿ ಜೋಡಣೆ, ಇಂಪಾದ ಸಂಗೀತ ಪ್ರತಿಯೊಂದು ಅಂಶಗಳೂ ಕರಾರುವಾಕಾಗಿದ್ದು ಗರಿಷ್ಠ ನೆಲೆಯಲ್ಲಿ, ನಾಟಕ ಪ್ರಸ್ತುತಿ ಪರಿಪೂರ್ಣತೆಯನ್ನು ಬಿಂಬಿಸಿತ್ತು.
ಸಾಮಾನ್ಯ ನೋಡುಗನ ಪಾಲಿಗೆ ಹೊಸ ಅನುಭವ, ಉತ್ತಮ ಮನೋರಂಜನೆಯನ್ನು ಒದಗಿಸಿದ ನಾಟಕದ ರಸಗಥೆಯ ಕಥಾವಸ್ತು, ಪ್ರತಿಹೆಜ್ಜೆಯಲ್ಲೂ ಕುತೂಹಲ-ಕಾತುರತೆ ಕೆರಳಿಸಿದ ನಾಟಕದ ಉತ್ತರಾರ್ಧದ ಆಕರ್ಷಣೆ, ಜಾನಪದ ಕಥೆಗಳ ಛಾಯೆಯಂತೆ ಆಗಸದಲ್ಲಿ ತೇಲಿಬರುವ ಪಕ್ಷಿಗಳ ಹಿಂಡು, ಅಚ್ಚರಿ ಮೂಡಿಸುವ ತೆರದಲ್ಲಿ ತೆವಳಿ ಬರುವ ಬೃಹತ್ ಉಡ, ಬಾವಿಯ ಆಳದಲ್ಲಿದ್ದ ಪಾದರಸದ ಒರತೆ, ಅದನ್ನು ಮೊಗೆದು ತುಂಬಿದ ಕೊಡ ಮೇಲಕ್ಕೇರುವ ಚಮತ್ಕಾರ, ಸಮುದ್ರದ ಚಂಡಮಾರುತ ಮುಂತಾದ ದೃಶ್ಯಗಳನ್ನು ಉತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ತೋರಿದ ಬಗೆ ಸ್ತುತ್ಯಾರ್ಹವಾಗಿತ್ತು. ಸಮರ್ಥ ರಂಗರೂಪದ ಪ್ರಸ್ತುತಿಯ ಹಳೆಗನ್ನಡ ಸೊಗಡಿನ ಸಂಭಾಷಣೆ ಅರ್ಥಪೂರ್ಣವಾಗಿ ಅಲ್ಲಲ್ಲಿ ಮೆಲುಕು ಹಾಕುವಂತಿತ್ತು. ಬಿಗಿಬಂಧದ ನಿರ್ದೇಶನ ಹರಿತವಾಗಿದ್ದು, ನಿರ್ದೇಶಕರ ಕಾರ್ಯಕ್ಷಮತೆ ಎದ್ದು ಕಾಣುತ್ತಿತ್ತು. ಉತ್ತಮ ಕಲಾವಿದರ ತಂಡವನ್ನು ಸಮರ್ಥವಾಗಿ ದುಡಿಸಿಕೊಂಡ ನಾಟಕದ ನಿರ್ಮಾಣ ಸೊಗಸಾಗಿದ್ದು, ಇಡೀ ತಂಡಕ್ಕೆ ಹ್ಯಾಟ್ಸಾಫ್.
- ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.