ಬೆಳಗಾವಿ ಮಹಾನಗರದ ‘ರಂಗಸಂಪದ’ ತಂಡದವರು ಕಳೆದ ರವಿವಾರ ದಿನಾಂಕ 20 ಅಕ್ಟೋಬರ್ 2024ರಂದು ಪ್ರದರ್ಶಿಸಿದ ‘ಡಿಯರ್ ಅಜ್ಜೋ’ ಎಂಬ ಕನ್ನಡ ನಾಟಕ ತುಂಬಾ ಯಶಸ್ವಿಯಾಯ್ತು. ಮರಾಠಿ ನಾಟಕಕಾರ್ತಿ ಶ್ರೀಮತಿ ಮಯೂರಿ ದೇಶಮುಖ ರಚಿಸಿದ ನಾಟಕವನ್ನು ಕನ್ನಡಕ್ಕೆ ತಂದವರು ಹೆಸರಾಂತ ರಂಗಕರ್ಮಿ ಡಾ. ಯಶವಂತ ಸರದೇಶಪಾಂಡೆ.
ನಿವೃತ್ತ ಪ್ರಾಧ್ಯಾಪಕರು ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾರೆ. ಅವರ ಮಗ ಸೊಸೆ ಸಾಫ್ಟ್ ವೇರ್ ಇಂಜಿನಿಯರ್ಸ್ ಅಮೇರಿಕಾದ ಅಟ್ಲಾಂಟಾದಲ್ಲಿದ್ದವರು. ಆಕಸ್ಮಿಕ ಅಪಘಾತವೊಂದರಲ್ಲಿ ಅವರು ಸಾವನ್ನಪ್ಪುತ್ತಾರೆ. ಹದಿಹರೆಯದ ಮಗಳು ಅಲ್ಲಿ ಏಕಾಂಗಿ. ಅಲ್ಲಿಯೇ ಹುಟ್ಟಿ ಬೆಳೆದವಳು. ಅನಿವಾರ್ಯ ಸಂದರ್ಭದಲ್ಲಿ ಆಕೆ ಭಾರತಕ್ಕೆ ಬರುತ್ತಾಳೆ. ಅಜ್ಜ ಮೊಮ್ಮಗಳಲ್ಲಿನ ಜನರೇಷನ್ ಗ್ಯಾಪ್ ದೊಡ್ಡದು. ಸಂಪ್ರದಾಯಸ್ಥ ಅಜ್ಜ, ಅಲ್ಟ್ರಾ ಮಾಡ್ರನ್ ಮೊಮ್ಮಗಳು. ವೇಷ ಭೂಷಣ, ನಡೆ ನುಡಿ, ಆಹಾರ ವಿಹಾರಗಳಲ್ಲಿ ಪರಸ್ಪರ ಹೊಂದಿಕೆ ಆಗುವುದು ಹೇಗೆ ? ಹೀಗೆಯೇ ವರ್ಷಗಳೆರಡು ಉರುಳುತ್ತದೆ. ಅವರಿಬ್ಬರು ಪರಸ್ಪರ ಅರಿತುಕೊಳ್ಳಲು ಸಮಯ ಹಿಡಿದರೂ ಕಾಲಕ್ರಮೇಣ ಅವರಲ್ಲಿ ಹೊಂದಾಣಿಕೆಯಾಗತೊಡಗುತ್ತದೆ. ಸಂಬಂಧ ಸೆಳೆದು ಕಟ್ಟುತ್ತದೆ.
ಏಕಾಂಗಿ ಅಜ್ಜನೊಂದಿಗೆ ಇರುತ್ತ, ಬದುಕಿನಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತ ತನ್ನ ಆಯ್ಕೆಯ ಶಿಕ್ಷಣವನ್ನು ಪಡೆಯುತ್ತಾಳೆ. ಅಂತಿಮವಾಗಿ ಅಜ್ಜನೊಡನೆ ಇರುವ ತೀರ್ಮಾನ ತೆಗೆದುಕೊಳ್ಳುತ್ತಾಳೆ. ರಾಹುಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಬಯಸುತ್ತಾಳೆ. ಆದರೆ ಪ್ರೀತಿಯ ಅಜ್ಜನನ್ನು ಬಿಟ್ಟು ಗಂಡನ ಮನೆಗೆ ತೆರಳಲು ಆಕೆಗೆ ಎಳ್ಳಷ್ಟೂ ಮನಸ್ಸಿಲ್ಲ. ಬೇಕಿದ್ದರೆ ಗಂಡನೇ ನಮ್ಮಲ್ಲಿ ಬಂದು ಇರಲಿ ಎನ್ನುತ್ತಾಳೆ. ಅದು ಅಸಾಧ್ಯವೆನ್ನುತ್ತಾನೆ ಅಜ್ಜ. ಕೋಪಗೊಂಡ ಆಕೆ ಅಟ್ಲಾಂಟಾಗೆ ಹೊರಟು ನಿಲ್ಲುತ್ತಾಳೆ. ಆಘಾತಗೊಂಡ ಅಜ್ಜನಿಗೆ ತಾನು ತನ್ನ ದಾಖಲೆಗಳನ್ನು ತರಲು ಹೊರಟಿರುವುದಾಗಿ ಹೇಳಿ ಸಮಾಧಾನ ಪಡಿಸುತ್ತಾಳೆ.
ಮೊಮ್ಮಗಳ ಮೇಲಣ ಪ್ರೀತಿವಾತ್ಸಲ್ಯಗಳ ಕಾರಣ ಅಜ್ಜ ಅವಳಿಗೆ ಸರ್ಪ್ರೈಸ್ ಮಾಡುತ್ತಾರೆ. ಆಕೆ ಮೆಚ್ಚಿದ ಯುವಕನೊಂದಿಗೆ ಗೋವೆಯಲ್ಲಿ ಅವಳ ಮದುವೆಯನ್ನು ಭಾರೀ ಅದ್ದೂರಿಯಿಂದ ನೆರವೇರಿಸುತ್ತಾರೆ. ನಾಟಕ ಅನಿರೀಕ್ಷಿತವಾಗಿ ಸುಖಾಂತವಾಗುತ್ತದೆ.
ತೊಂಬತ್ತು ನಿಮಿಷಗಳ ನಾಟಕ. ಅಜ್ಜ ಮೊಮ್ಮಗಳ ನಡುವಿನ ಮುಖಾಮುಖಿ. ಅದೊಂದು ಅಪೂರ್ವ ಅನುಸಂಧಾನ. ಕ್ಷಣಕ್ಷಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವ ನಡೆ ನುಡಿ. ನಾಟಕದ ಎಲ್ಲಾ ದೃಶ್ಯಗಳು ಚುರುಕು ಚುರುಕಾಗಿ ಮೂಡಿಬರುತ್ತದೆ. ರಂಗಮಂದಿರದಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಶಾಂತತೆ. ಅತ್ಯಂತ ಅಪರೂಪದ ಪ್ರದರ್ಶನ. ಗಟ್ಟಿದ್ರವ್ಯದ ವಾಸ್ತವ ಕಥೆ. ಅಜ್ಜನ ಪಾತ್ರದಲ್ಲಿ ಡಾ. ಅರವಿಂದ ಕುಲಕರ್ಣಿಯವರ ಅಭಿನಯ ಅದ್ಭುತ. ಮೊಮ್ಮಗಳ ಪಾತ್ರದ ಕುಮಾರಿ ಸ್ನೇಹಾ ಕುಲಕರ್ಣಿಯವರ ಪ್ರಬುದ್ಧ ಅಭಿನಯ ಪರಮಾದ್ಭುತ. ಒಂದರ್ಥದಲ್ಲಿ ಪರಸ್ಪರ ಪೈಪೋಟಿ. ಅಂತೆಯೇ ಪರಿಣಾಮಕಾರಿ.
ಪುಣೆ ವಿಶ್ವ ವಿದ್ಯಾಲಯದಿಂದ ಥಿಯೇಟರ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪಿ.ಎಚ್.ಡಿ.ಗಾಗಿ ಸಂಶೋಧನೆ ಕೈಕೊಂಡಿರುವ ಇಪ್ಪತ್ತೈದರ ಯುವಕ ವೈಭವ ಲೋಕೂರ ನಿರ್ದೇಶಿಸಿದ ಈ ನಾಟಕ ಅತ್ಯಂತ ಯಶಸ್ವಿ. ಬೆಳಕಿನ ಸಂಯೋಜನೆ, ರಂಗ ಸಂಗೀತ, ತಂಡ ಮನೋಭಾವದ ನಿರ್ವಹಣೆ ಹೀಗೆ ಎಲ್ಲ ದೃಷ್ಠಿಯಿಂದಲೂ ಪರಿಪೂರ್ಣ, ಅನುವಾದ ಎನಿಸದಷ್ಟು ನಾಟಕ ಅಪ್ಪಟ ಕನ್ನಡದ್ದೆನಿಸುತ್ತದೆ.
ರಂಗಸಂಪದ ತಂಡಕ್ಕೆ ‘ಬೆಳಗಾವಿ ಕಾಲಾವಕಾಶ ಸಂಘ’ದ ಸದಸ್ಯರು ನೀಡಿದ ಸಹಕಾರ ಕೂಡ ಸ್ಮರಣೀಯ. ಎಲ್ಲರಿಗೂ ಅಭಿನಂದನೆಗಳು.
ಡಾ. ಬಸವರಾಜ ಜಗಜಂಪಿ, ಬೆಳಗಾವಿ
ವಿಶ್ರಾಂತ ಪ್ರಚಾರ್ಯರು, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ ಲಿಂಗರಾಜ ಮಹಾವಿದ್ಯಾಲಯದ ಸುಪ್ರಸಿದ್ಧ ನಟ, ನಾಟಕಕಾರ. ರಂಗಭೂಮಿ, ಜನಪದ ಮತ್ತು ವಚನ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರ 300 ಲೇಖನಗಳು ಹಾಗೂ 25 ಕೃತಿಗಳು ಪ್ರಕತಗೊಂಡಿವೆ.