“ಇ ತಿ ಹ ಯ” ಎಂಬ ನಾಟಕದ ಎರಡು ಪ್ರದರ್ಶನಗಳನ್ನು 28 ಅಕ್ಟೋಬರ್ 2024 ಸರಳಾಂಗಣದಲ್ಲಿ ಏರ್ಪಡಿಸಿದ್ದರು. ಈ ನಾಟಕವನ್ನು ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಈ ಸಾಲಿನ ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಮಾಲಿಕೆ ಅಡಿಯಲ್ಲಿ ನಾಟಕ ಪ್ರದರ್ಶಿಸಿದರು. ವಿಶೇಷವೆಂದರೆ ಕೆಲವು ವಿದ್ಯಾರ್ಥಿಗಳು ನಾಟಕದ ಪ್ರದರ್ಶನದಲ್ಲಿ ಭಾಗವಹಿಸಿದ್ದು ಮಿಕ್ಕ ವಿದ್ಯಾರ್ಥಿಗಳು ನೇಪಥ್ಯದಲ್ಲಿ ಕೆಲಸ ಮಾಡಿದರು.
“ಐತಿಹ್ಯ ಮಾಲೆಯ ಕಥೆಗಳು” …ಇದು ಕೊಟ್ಟಾರತ್ತಿಲ್ ಶಂಕುಣ್ಣಿ ಬರೆದ ಮಲಯಾಳಂ ಕಥೆಗಳು. ಶ್ರೀ ಡಿ.ಆರ್. ನಾಗರಾಜ್ ನೆನಪಿನ ಅಕ್ಷರ ಚಿಂತನ ಎಂಬ ಅಡಿಯಲ್ಲಿ ಶ್ರೀ ಬಿ.ಆರ್. ವೆಂಕಟ್ರಮಣ ಐತಾಳ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಥಾ ಮಾಲಿಕೆಯಿಂದ ಆಯ್ದ ನಾಲ್ಕು ಕಥೆಗಳನ್ನು ಹೆಣೆದು ಕಥಾನಕ ರೂಪದಲ್ಲಿ ರಂಗದ ಮೇಲೆ ಪ್ರದರ್ಶಿಸಲಾಯಿತು. ಈ ಕಥೆಗಳಲ್ಲಿ ಕಾರಣಿಕ ಪುರುಷರು ಹೇಗೆ ಸಮಾಜದ ಹಿತ ಕಾಪಾಡಲು ಕಾರಣೀಭೂತರಾಗಿದ್ದರು ಎಂಬ ವಿಷಯವನ್ನು ಕಥೆಗಳ ಮೂಲಕ ಕಥೆಗಾರರು ಆ ಕಾಲಕ್ಕೆ ಅನುಗುಣವಾಗಿ ನಿರೂಪಿಸಿದ್ದಾರೆ. ಈ ಕಥೆಗಳಲ್ಲಿ ಬರುವ ಕಾರಣಿಕರು ವಿವಿಧ ಜಾತಿಯವರಾಗಿದ್ದರೂ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಜನರಲ್ಲಿ ಸೌಹಾರ್ದತೆ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದರು ಎಂಬುದನ್ನು ಈ ಕಥೆಗಳ ಮೂಲಕ ತಿಳಿಹೇಳಿದ್ದಾರೆ.
ಮಾನವೀಯತೆ, ಭಕ್ತಿ ಹಾಗೂ ಏಕಾಗ್ರತೆಯಿಂದ ಮನುಷ್ಯನು ಸಮಾಜದಲ್ಲಿ ಮಾದರಿಯಾಗಬಲ್ಲನೆಂದು ಕಥೆಗಳು ನಿರೂಪಿಸುತ್ತವೆ.
ನಿರ್ದೇಶಕರು ಈ ಕಥೆಗಳನ್ನು ಕಥನ ರೂಪದಲ್ಲಿ ವಿನ್ಯಾಸಗೊಳಿಸುವಾಗ ಕಥನದಲ್ಲಿ ಬರುವ ಕಾರಣಿಕ ಪುರುಷರು ಹಾಗೂ ಅವರ ಚಿಂತನೆ ಈಗಿನ ವಿದ್ಯಮಾನಕ್ಕೂ ಹೇಗೆ ಪ್ರಸ್ತುತ ಹಾಗೂ ಅನುಕರಣೀಯ ಎಂಬುದನ್ನು ರಂಗದ ಮೇಲೆ ಸಮರ್ಥವಾಗಿ ತಂದಿದ್ದಾರೆ.
ವಿದ್ಯಾರ್ಥಿಗಳು ಮೊದಲನೇ ಬಾರಿ ರಂಗದ ಮೇಲೆ ಪ್ರದರ್ಶನ ನೀಡಿದ್ದರೂ, ಅವರ ಅಂಗಿಕ ಹಾಗೂ ವಾಚಿಕ ಅಭಿನಯ ಯಾವುದೇ ಕೊರತೆ ಇಲ್ಲದಂತಿತ್ತು.
ಈ ನಾಟಕದ ನಿರ್ದೇಶಕಿ ಡಾಕ್ಟರ್ ಎಸ್.ವಿ. ಸುಷ್ಮಾ ನಾಟಕದ ನಿರ್ದೇಶನವಲ್ಲದೆ, ಅಚ್ಚುಕಟ್ಟಾದ ಬೆಳಕಿನ ವಿನ್ಯಾಸ, ಹಿನ್ನೆಲೆ ಸಂಗೀತ, ವಿಶಿಷ್ಟವಾದ ವೇದಿಕೆ ವಿನ್ಯಾಸ ಹಾಗೂ ರಂಗಪರಿಕರಗಳಿಂದ ನಾಟಕ ಪ್ರದರ್ಶನವು ದೃಶ್ಯಕಾವ್ಯದಂತೆ ಮೂಡಿ ಬರಲು ಸಹಾಯಕವಾಯಿತು. ಎರಡು ಪ್ರದರ್ಶನಗಳಿಗೆ ತುಂಬಿದ ಪ್ರೇಕ್ಷಾ ಗೃಹ ನಾಟಕದ ಯಶಸ್ಸಿಗೆ ಕಾರಣಿಭೂತವಾಯಿತು. ಈ ನಾಟಕದ ನಿರ್ದೇಶನ ಮಾಡಿದ ಡಾಕ್ಟರ್ ಎಸ್.ವಿ. ಸುಷ್ಮಾರವರಿಗೆ ಅಭಿನಂದನೆಗಳು.
ಹೆಚ್.ಎಸ್. ಶ್ರೀನಿವಾಸ
ಗಿರಿನಗರ, ಬೆಂಗಳೂರು.