ನಾನು ಇದುವರೆಗೆ ಕಂಡ best ineractive childrens’ activity. ‘ಲಾ ಪೋ ಲಾ’ ಎಂಬ ಮಕ್ಕಳಾಟ,
ಈ ಆಟ ಸುರುವಾಗೋದೇ ಸುತ್ತಲಿದ್ದ ಮಕ್ಕಳ ಗುಜು ಗುಜು ತಾರಕಕ್ಕೇರಿದ ಮೇಲೆ. ಗೌಜಿ ಯ ಮಧ್ಯದಲ್ಲೇ ಮಕ್ಕಳ ಮಧ್ಯೆ ಇದ್ದ ರಟ್ಟಿನ ಪೆಟ್ಟಿಗೆಯೊಳಗಿಂದ ಧಡಕ್ ಅಂತ ಸದ್ದು. ಪೆಟ್ಟಿಗೆ ಅಲ್ಲಾಡ್ತದೆ. ಗೌಜಿಯೆಲ್ಲ ಬಂದ್! ಏಕ್ ದಂ ಮೌನ. ಸ್ವಲ್ಪ ಸಮಯದ ನಂತರ ಮತ್ತೆ ಸದ್ದು. ಈಗ ಸ್ವಲ್ಪ ಧೈರ್ಯಸ್ಥೆ ಹುಡುಗಿಯೊಬ್ಬಳು ಪೆಟ್ಟಿಗೆಯ ಹತ್ತಿರ ಹೋಗಿ ಇಣುಕ್ತಾಳೆ. ನಿಧಾನಕ್ಕೆ ಕೈಯೊಂದು ಹೊರಬರ್ತದೆ. ಮತ್ತೆ ಕಾಲು…ಮತ್ತೆ ಎರಡೂ ಕೈ, ಎರಡೂ ಕಾಲು. ಮತ್ತೆ ತಲೆ…ಹೀಗೆ ಮಕ್ಕಳ ಕುತೂಹಲ ಉತ್ತುಂಗಕ್ಕೆ ಏರ್ತಿದ್ದಂತೆ ಹೊರಬರ್ತಾನೆ ಕ್ಲೌನ್. ‘ಲಾ ಪೋ ಲಾ’ ಆದರೆ ಅವನಿಗೆ ಪೆಟ್ಟಿಗೆಯಿಂದ ಹೊರ ಬರೋದಕ್ಕಾಗಲ್ವೇ! ಅದಕ್ಕೆ ಮಕ್ಕಳ ಸಹಾಯವೇ ಬೇಕು. ಹೇಗೋ ಹೇಗೋ ಮಾಡಿ ಅವನನ್ನ ಹೊರತಂದ ಮೇಲೆ ನೋಡಿ, ಸುರುವಾಗುತ್ತೆ ಆಟ. ಇಡೀ ಒಂದು ಘಂಟೆಯ ಮಕ್ಕಳಾಟ.
ಈ ‘ಲಾ ಪೋ ಲಾ ನಮ್ಮೊಳಗಿನದೇ ಮಗು’. ಆಟದ ಉದ್ದಕ್ಕೂ ‘ಲಾ ಪೋ ಲಾ’ ಮಕ್ಕಳ ಜೊತೆಗೇ ಆಡುತ್ತ, ಅವರಿಗೆ ದನಿಯಾಗುತ್ತ ಹೋಗುತ್ತಾನೆ.ನಾವು ಮರೆತ ಜಗತ್ತನ್ನ ನೆನಪಿಸುತ್ತಾನೆ. ಕೆಲ ಮಕ್ಕಳು ಶಾಲೆಗೆ ಹೋಗುವ ಜಗತ್ತು, ಇನ್ನು ಕೆಲ ಮಕ್ಕಳಿಗೆ ಶಾಲೆ ಮರೀಚಿಕೆಯಾಗಿರುವ ಜಗತ್ತು. ದುಡಿವ ಮಕ್ಕಳ ಜಗತ್ತು,ಇನ್ನೂ ಮಕ್ಕಳ ಜಗತ್ತಿಗೆ ಬರದೇ ಇರುವ ಮಕ್ಕಳ ಜಗತ್ತು. ಬಾಲ್ಯವನ್ನೇ ಕಾಣದ ಮಕ್ಕಳ ಜಗತ್ತು….ಹೀಗೆ ಎಲ್ಲ ಬಗೆಯ ಮಕ್ಕಳಿಗೂ ದನಿಯಾಗುತ್ತ ಎಚ್ಚರಿಸುತ್ತ ಸಾಗುತ್ತಾನೆ. ಮಕ್ಕಳನ್ನೇ ಒಳಗೊಳ್ಳುತ್ತ, ಆಡುತ್ತ ಆಡುತ್ತ ಕತೆ ಹೇಳುತ್ತ ಸಾಗುತ್ತಾನೆ. ಇಲ್ಲಿ ಮಾತುಗಳಿಲ್ಲ. ಆಟಗಳಿವೆ, ಕುಣಿತಗಳಿವೆ ಬೆಚ್ಚಿಕೊಳ್ಳಲು ಕತೆಗಳಿವೆ. ಆಟ ಮುಗಿಸಿ ಹೊರಬರುವಾಗ ನಾವು ನಮ್ಮದೇ ಕತೆಗಳನ್ನು ಹೊತ್ತು ಬರುತ್ತೇವೆ.
- ಕಿರಣ್ ಭಟ್ ಹೊನ್ನಾವರ, ವಿಮರ್ಶಕರು