ಮೈಸೂರಿನಲ್ಲಿ ‘ಸಂಚಲನ ಮೈಸೂರು’ ಇವರ ವತಿಯಿಂದ ನಡೆದ ‘ಮಹಿಳಾ ನಾಟಕೋತ್ಸವ’ದಲ್ಲಿ ದಿನಾಂಕ 05 ಡಿಸೆಂಬರ್ 2024ರಂದು ರಂಗಬಂಡಿ ಮಳವಳ್ಳಿ (ರಿ.) ತಂಡದವರಿಂದ ಏಕವ್ಯಕ್ತಿ ಪ್ರಯೋಗದ ‘ಮಧುರ ಮಂಡೋದರಿ’ ನಾಟಕವನ್ನು ಕಲಾಮಂದಿರ ಆವರಣ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ತುಂಬಾ ದಿನಗಳಿಂದ ಕೆಲಸ, ಒತ್ತಡಗಳಿಂದ ತುಂಬಿಕೊಂಡಿದ್ದ ಬದುಕಿಗೆ ವಿರಾಮದ ಅಗತ್ಯ ಅನ್ನಿಸಿತ್ತು. ಅಂದುಕೊಂಡಂತೆ ನಾಟಕ ಪ್ರದರ್ಶನಕ್ಕೆ ಕೊಂಚ ಬಿಡುವು ಮಾಡಿಕೊಂಡು ಹೋದೆ ತುಂಬಾ ಕುತೂಹಲದಿಂದ ಕಾದ ಘಳಿಗೆ ಅಂದರೆ ತಪ್ಪಾಗಲಾರದು, ಏಕವ್ಯಕ್ತಿ ಪ್ರಯೋಗ ಅಂದ್ರೆ ಒಂದು ರೀತಿಯ ಸವಾಲ್ ಆಗಿರುತ್ತೆ ಯಾಕೆಂದರೆ ಮುಖ್ಯವಾಗಿ ರಂಗದ ಮೇಲೆ ಒಬ್ಬರೇ ಇದ್ದು ಪ್ರೇಕ್ಷಕರನ್ನು ಒಂದು ಗಂಟೆ ಇಲ್ಲವೇ ಅದಕ್ಕು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ಸುಲಭವಾಗಿರುವುದಿಲ್ಲ. ಆದರೆ ಮಧುರ ಮತ್ತು ಮಂಡೋದರಿ ಎರಡು ಪಾತ್ರಗಳನ್ನು ಪ್ರಸ್ತುತ ಪಡಿಸಿದ ವನಿತಾ ರಾಜೇಶ್ ರವರು ತುಂಬಾ ಅಚ್ಚುಕಟ್ಟಾಗಿ ಆ ಪಾತ್ರದಲ್ಲಿ ಜೀವಿಸಿದ ರೀತಿ ಎಲ್ಲರನ್ನೂ ಸೆಳೆಯುವಂತೆ ಮಾಡಿತ್ತು. ನಾಟಕಗಳಲ್ಲಿ ಸ್ತ್ರೀ ಪಾತ್ರಗಳಿಗೆ ಮಹತ್ವ ಸ್ವಲ್ಪ ಕಡಿಮೆ ಎನ್ನುತ್ತಾರೆ. ಆದರೆ ಹೆಣ್ಣಿನ ಪಾತ್ರಗಳಿಗೆ ಹೆಣ್ಣೆ ಸಾಟಿ ಯಾಕೆಂದರೆ ಹೆಣ್ಣಿನ ತುಮುಲಗಳನ್ನು ಹೆಣ್ಣು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಆ ಪಾತ್ರದಲ್ಲಿ ವನಿತಾರವರು ತನ್ನನ್ನು ತೊಡಗಿಸಿಕೊಂಡ ರೀತಿ ತುಂಬಾ ಅದ್ಭುತವೆನಿಸಿತು.
ಈ ಕಥಾ ವಸ್ತುವನ್ನು ಹಿಡಿದು ನಿರ್ದೇಶನ ಮಾಡುವ ಮೂಲಕ ಮಧು ಮಳವಳ್ಳಿಯವರು ಯಶಸ್ವಿಯಾಗಿದ್ದಾರೆ ಅಭಿನಂದನೆಗಳು ಸರ್. ಪ್ರಸನ್ನ ಕುಮಾರ್ ಕೆರೆಗೋಡು ಇವರು ರಚನೆ ಮಾಡಿದ ಈ ನಾಟಕಕ್ಕೆ ಸೊಗಸಗಾಗಿ ಸಂಗೀತ ಸಂಯೋಜನೆ ಮಾಡಿರುವವರು ಮೈಸೂರಿನ ಸುಬ್ರಮಣ್ಯ, ರಂಗ ವಿನ್ಯಾಸ ಮಾಡಿದಂತಹ ಎಚ್.ಕೆ. ವಿಶ್ವನಾಥ್, ಹಾಗೆ ಬೆಳಕಿನ ವಿನ್ಯಾಸ ಮಾಡಿರುವ ಅರುಣ್ ಮೂರ್ತಿಯವರು ಮತ್ತು ಸಹ ನಿರ್ದೇಶನ ಮಾಡಿದಂತಹ ರಾಜೇಶ್ ಐ.ಜೆ.ಯವರು. ಹೀಗೆ ಇಡೀ ತಂಡಕ್ಕೆ ನನ್ನ ಗೌರವ ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಈ ನಾಟಕ ಇನ್ನಷ್ಟು ಯಶಸ್ವಿ ಪ್ರದರ್ಶನ ಕಾಣಲಿ ಎಂದು ಆಶಿಸುತ್ತಾ, ಮತ್ತಷ್ಟು ವಿಭಿನ್ನ ರೀತಿಯಲ್ಲಿ ಒಳ್ಳೆಯ ನಾಟಕಗಳ ಪ್ರಸ್ತುತಪಡಿಸುವ ಮೂಲಕ ಈ ನಾಟಕದ ರೂವಾರಿಯಾಗಿರುವ ನಿಮ್ಮೆಲ್ಲರಿಗೂ ಈ ಕ್ಷೇತ್ರದಲ್ಲಿ ಯಶಸ್ಸು, ಕೀರ್ತಿ, ಸಿಗಲೆಂದು ಹಾರೈಸುತ್ತೇನೆ.
ಕೃತಿ ಸಕಲೇಶಪುರ