ವೃತ್ತಿರಂಗಭೂಮಿಯ ನಾಟಕಗಳಲ್ಲಿ ಕಾಣಸಿಗುತ್ತಿದ್ದ ದಿಟ್ಟ ಮಹಿಳಾ ಪಾತ್ರಗಳೆಂದರೆ ಒಂದೋ ಖಳನಾಯಕಿಯ ಪಾತ್ರಗಳು ಅಥವಾ ಹಾಸ್ಯಪಾತ್ರಗಳು. ಮುಖ್ಯನಾಯಕಿಯರು ಪಿತೃಪ್ರಧಾನ ಸಮಾಜದ ಎಲ್ಲ ಹೊರೆಯನ್ನು ಹೊತ್ತು ಬೆಂದು ಬಸವಳಿದಂತೆ ಕಂಡರೆ, ಈ ದಿಟ್ಟ ಹಾಸ್ಯ ಪ್ರಧಾನ ಪಾತ್ರಗಳು ಸಮಾಜ ಹೇರುವ ಎಲ್ಲಾ ಭಾರಗಳನ್ನು ಕಿತ್ತೆಸೆದು ಬಿಡುಗಡೆಗೊಂಡ ಆತ್ಮಗಳಂತೆ ಕಾಣುತ್ತವೆ. ಅವು ಸಮಾಜವನ್ನು ಪ್ರಶ್ನಿಸುತ್ತವೆ. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತವೆ. ಹಾಗೆ ಹೇಳಲು ಅವು ಆಯ್ಕೆ ಮಾಡಿಕೊಳ್ಳುವುದು ಹಾಸ್ಯ, ವ್ಯಂಗ್ಯ, ಲೇವಡಿಯ ಚಾಟಿಗಳನ್ನು, ಅದಕ್ಕೆ ಸೃಷ್ಟಿಮಾಡಿಕೊಂಡ ಭಾಷೆಯೇ ಕುತೂಹಲಕಾರಿ ಎನಿಸುತ್ತದೆ. ದಿನನಿತ್ಯದ ಅಡುಗೆಮನೆ ವಸ್ತುಗಳು, ತರಕಾರಿ, ಸಾಮಾನುಗಳು ರೂಪಕಗಳಾಗಿ ಒದಗಿಬರುತ್ತವೆ. ಈಗ ಅದಕ್ಕೆ ‘ಡಬಲ್ ಮೀನಿಂಗ್’ ಎಂಬ ಲೋಕಕ್ಕೆ ಒಪ್ಪಿಸಿದ ಭಾಷೆಯನ್ನು ಅನ್ವಯಿಸಿ, ಈ ಹೊಳಹನ್ನೂ ತುಳಿಯುವ ಹುನ್ನಾರ ಪಿತೃಪ್ರಧಾನ ವ್ಯವಸ್ಥೆಯಿಂದಲೇ ಬಂದಿದೆ ಎನಿಸುತ್ತದೆ. ಸಮಾಜ ಅಂತಹ ವ್ಯಕ್ತಿತ್ವಗಳಿಗೆ ‘ಬಜಾರಿ’ ಎಂದು ನಾಮಕರಣ ಮಾಡುತ್ತದೆ. ಅಂತಹ ಪಾತ್ರಗಳನ್ನು ‘ನಕ್ಕು ಮರೆತುಬಿಡುವಂತಹ ಹಾಸ್ಯ/ಬಜಾರಿ ಪಾತ್ರಗಳು’ ಎಂದೇ ಸ್ವೀಕರಿಸುತ್ತವೆ. ಅಲ್ಲೊಂದು ಪುರುಷಲೋಕದ ವೈಯಕ್ತಿಕ ಒಳರಾಜಕಾರಣವೂ ಇದೆಯಲ್ಲವೆ?’ ಅಂತಹ ಪಾತ್ರಕ್ಕೆ ನವೆಂಬರ್ 1ರಂದು ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಪ್ರದರ್ಶಿತವಾದ ‘ಪ್ರಾಜೆಕ್ಟ್ ಡಾರ್ಲಿಂಗ್’ ನಾಟಕದ ಖಾನಾವಳಿ ಚೆನ್ನಿ ಉತ್ತಮ ಉದಾಹರಣೆ.
ಇಂಥ ದಿಟ್ಟ ಸ್ತ್ರೀ ಪಾತ್ರಗಳ ಹಿಂದೆ ಹೊರಟ ಶರಣ್ಯ ರಾಮಪ್ರಕಾಶ್, ಎರಡು ವರ್ಷಗಳ ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡದ್ದು ಆ ಸ್ತ್ರೀ ಪಾತ್ರ ಮಾಡಿದವರ ಬದುಕು, ಅವರ ಇಂದಿನ ಸ್ಥಿತಿಗತಿಗಳು, ಇವುಗಳ ಕಿಡಿಯಿಂದ ತೆರೆದುಕೊಂಡ ಸ್ತ್ರೀ ಲೈಂಗಿಕತೆಯ ಅಭಿವ್ಯಕ್ತಿ ಮಾರ್ಗಗಳು, ಸೆನ್ಸಾರ್‌ಶಿಷ್, ಸಂಸ್ಕೃತಿಯ ಹೆಸರಿನಲ್ಲೂ ಆಗುತ್ತಿರುವ ದಬ್ಬಾಳಿಕೆಗಳು, ಪುರುಷಲೋಕದ ಪ್ರಾಬಲ್ಯ, ರಾಜಕಾರಣದ ನಾನಾ ರೂಪಗಳು. ಈ ಎಲ್ಲವುಗಳನ್ನೂ ಹೇಳಲು ಶರಣ್ಯ ಬಳಸಿಕೊಂಡಿರುವುದು ರಂಗಭೂಮಿಯೆಂಬ ಜೀವಂತ ಮಾಧ್ಯಮವನ್ನು. ಸದ್ಯದ ಪರಿಸ್ಥಿತಿಯಲ್ಲಿ ಲೋಕವನ್ನು ತನ್ನೆಲ್ಲಾ ಸೂಕ್ಷ್ಮಗಳೊಂದಿಗೆ ಅರ್ಥಮಾಡಿಕೊಳ್ಳಲು ನಮಗೆ ಉಳಿದಿರುವ ಮಾರ್ಗ ಕಲೆ ಒಂದೇ.
ಐದು ಜನ ಸಂಶೋಧಕರು ಚೆನ್ನಿ ಮುಂತಾದ ಕನ್ನಡ ರ೦ಗಭೂಮಿಯ ಸ್ತ್ರೀ ಪಾತ್ರಗಳನ್ನು ಹುಡುಕುವುದರೊಂದಿಗೆ ಈ ನಾಟಕ ಶುರುವಾಗುತ್ತದೆ. ಪ್ರಯೋಗಾತ್ಮಕ ನಾಟಕವಾಗಿ ‘ಪ್ರಾಜೆಕ್ಟ್ ಡಾರ್ಲಿಂಗ್’ ಅನ್ನು ನೋಡಬಹುದು. ವಿಡಿಯೋ ಪ್ರಾತ್ಯಕ್ಷಿಕೆಯ ತುಣುಕುಗಳು, ಛಾಯಾಚಿತ್ರ ಪ್ರಬಂಧಗಳು, ಧ್ವನಿಗ್ರಹಣದ ತುಣುಕುಗಳು, ಹಾಡು, ನೃತ್ಯ, ಗೊಂಬೆಯಾಟ, ಕ್ಲೋನಿಂಗ್ ಮುಂತಾದ ಹಲವಾರು ತಂತ್ರಗಳನ್ನು ಬಳಸಿ ಕಥೆ ಹೇಳಿದ್ದಾರೆ. ಈ ನಾಟಕಕ್ಕೆ ಅದು ಅಗತ್ಯವೂ ಆಗಿತ್ತು ಎನಿಸುತ್ತದೆ. ರಚನೆಯೂ ವಿಶಿಷ್ಟವಾಗಿದೆ. ವೃತ್ತಿ ರಂಗಭೂಮಿ ನಾಟಕಗಳ ಕಥೆ, ಅದರ ನಡುವೆ ಹಾಸ್ಯ ಮತ್ತು ಅದಕ್ಕೆ ಹೊಂದುವಂತೆ ಹಾಡುವ ಮಾದರಿ ಇಲ್ಲಿ ವಿಭಿನ್ನವಾಗಿ ಬಳಕೆಯಾಗಿದೆ. ನಾಟಕದ ಪಾತ್ರಧಾರಿಗಳೆಲ್ಲರೂ ನುರಿತ ರಂಗನಟ ನಟಿಯರೇ ಆಗಿರುವುದರಿಂದ ಮೊದಲಿನಿಂದ ಕೊನೆಯವರೆಗೂ ರಂಗದ ಮೇಲೆ ಶಕ್ತಿ ಸಂಚಯವಾಗುತ್ತಲೇ ಇರುತ್ತದೆ. ಶೃಂಗ ಬಿ.ವಿ, ಶಶಾಂಕ ರಾಜಶೇಖರ್, ಸುರಭಿ ವಶಿಷ್ಠ, ಮಾತಂಗಿ ಪ್ರಸನ್ನ, ಶೋಭನಾ ಕುಮಾರಿ ರಂಗದ ಮೇಲೆ ಇನ್ನಿಲ್ಲದಂತೆ ಅವರಿಸಿಕೊಳ್ಳುತ್ತಾರೆ. ನಿರ್ದೇಶಕಿ ಶರಣ್ಯ ರಾಮಪ್ರಕಾಶ್ ಅವರೂ ಇಡೀ ಸಂಶೋಧನಾತ್ಮಕ ಕಥೆಯನ್ನು ಕಲೆಯ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ ಹೇಳುವಲ್ಲಿ ಹಾಕಿದ ಶ್ರಮ ಎದ್ದುಕಾಣುತ್ತದೆ. ಬೆಳಕು, ಧ್ವನಿ, ಮಾತು, ಅಭಿನಯ ಈ ಎಲ್ಲದರ ಹದದೊಳಗೆ ಹಲವಾರು ಪ್ರತಿಮೆಗಳನ್ನು, ಸಂಕೇತಗಳನ್ನು ಸೃಷ್ಟಿಸಿದ್ದಾರೆ. ಅವರು ಈ ಸಂಶೋಧನೆಗಾಗಿ ಮಾಲತಿ ಸುಧೀರ್, ಹೆಲೆನ್ ಹುಬ್ಬಳ್ಳಿ… ಹೀಗೆ ರಂಗಭೂಮಿಯ ಅನೇಕ ಕಲಾವಿದೆಯರನ್ನು ಸಂದರ್ಶಿಸಿದ್ದಾರೆ. ಕುರ್ಚಿ, ಕಣ್ಣುಗಳು, ನಾಟಕದ ಕೊನೆಯಲ್ಲಿ ಲಕೋಟೆಯಲ್ಲಿ ಸಿಕ್ಕ ಫೋಟೊದಲ್ಲಿ ಕಾಣುವ ಚಿತ್ರ ಈ ಮಹಿಳಾ ಪಾತ್ರಗಳ ತೆರೆಯ ಹಿಂದಿನ, ಮುಂದಿನ ಒಳಮಿಡಿತಗಳನ್ನು ಹೇಳುವ ಪರಿಕರಗಳಾಗಿ, ಪ್ರತಿರೋಧದ ಸಂಕೇತಗಳಾಗಿ ಅಭಿವ್ಯಕ್ತಗೊಂಡಿವೆ, ಹುಡುಕಾಟದ ಮೂರ್ತರೂಪದಂತಿರುವ ಚೆನ್ನಿ ಒಂದು ಪಾತ್ರವಾಗಿ ಎಲ್ಲೂ ಕಾಣಿಸದ ಅಮೂರ್ತವಾಗಿ, ಅದರ ಸಂಕೇತಗಳಾಗಿ ಕಾಣಿಸುವುದು ಮತ್ತೊಂದು ಸಕಾರಾತ್ಮಕ ಅಂಶ. ನಾಟಕದ ಒಂದು ಕುದಿಬಿಂದುವಿನಲ್ಲಿ ಈ ಕಥೆ ಹುಡುಕಾಟಕ್ಕೆ ಒಂದು ಅಧ್ಯಾತ್ಮದ ಅರಿವಿನ ಸಾಲುಗಳು ಮುಚ್ಚಿದ ಬಾಗಿಲು ತೆರೆಯುವುದರ ಮೂಲಕ ಕಾಣಿಸುತ್ತದೆ. ಇದು ನಾಟಕಕ್ಕೊಂದು ಹೊಸ ಆಯಾಮವನ್ನು ದಕ್ಕಿಸಿಕೊಟ್ಟಿದೆ.
ಇದೊಂದು ಪ್ರಯೋಗಾತ್ಮಕ ರಂಗಭೂಮಿಯ ನಾಟಕ ಎಂದು ಆಹ್ವಾನ ಪತ್ರಿಕೆಯಲ್ಲಿಯೇ ನಮೂದಿಸಿದ್ದರೂ ಕಣ್ಣಿಗೆ ರಾಚುವ ಒಂದಷ್ಟು ವಿಷಯಗಳಿವೆ. ಒಮ್ಮೊಮ್ಮೆ ಒಂದು ಕವಿತೆಯನ್ನು ಅತಿಯಾಗಿ ತಿದ್ದಿದರೆ ಕವಿತೆಯೇ ಕುಸಿದುಹೋಗುತ್ತದಲ್ಲ, ಹಾಗೆಯೇ ಇಲ್ಲಿ ಅಷ್ಟೊಂದು ನುರಿತ ನಟರಿದ್ದು, ಹಲವು ಮಾಧ್ಯಮಗಳನ್ನು ಬಳಸಿಯೂ ನಾಟಕ ಭಾರವೆನಿಸುತ್ತದೆ. ಸಂಶೋಧಕರು ಶ್ರಮಪಟ್ಟು ಕಾಳಜಿಯಿಂದ ಕಲೆಹಾಕಿದ ವಿವರಗಳ ಜೊತೆ ನಡೆಯುತ್ತಾ ಇರುವಾಗ ಒಮ್ಮೊಮ್ಮೆ ಅಂದಾಜಿಗೆ ಸಿಗದೆ ಕಾಡಿನಲ್ಲಿ ಕಳೆದುಹೋದ ಹಾಗೆ, ಒಮ್ಮಿಂದೊಮ್ಮೆಲೇ ಪ್ರೇಕ್ಷಕರ ಮೇಲೆ ಉಸಿರು ತೆಗೆದುಕೊಳ್ಳಲೂ ಸಮಯ ಕೊಡದಷ್ಟು ಒಂದಾದ ಮೇಲೊಂದರಂತೆ ಅವನ್ನು ಹೇರಿದಂತೆ ಎನಿಸುತ್ತದೆ. ನಾಟಕ ಉಸಿರಾಡುವುದು ಅಲ್ಲಿರುವ ಸಂಘರ್ಷಗಳ ಕಾಣ್ಕೆಯಿಂದ. ಈ ನಾಟಕದಲ್ಲಿ ಅಂತಹ ಅಂಶಗಳ ಪ್ರಮಾಣ ಕಡಿಮೆ ಇರುವುದರಿಂದ ಇದಕ್ಕೊಂದು ಸರಳ ರೇಖಾತ್ಮಕ ನರೇಟಿವ್ ಎನಿಸುತ್ತದೆ. ಜೋರಾಗಿ ಸುರಿಯುವ ಜಡಿಮಳೆಯಂತೆ ಭಾಸವಾಗುವುದು ನಾಟಕದ ಮತ್ತೊಂದು ಮುಖ್ಯ ಅಂಶ. ಆದರೆ, ಒಂದು ನಾಟಕ ಹೀಗೆ ಇರಬೇಕು, ಕಲೆ ಹೀಗೆ ಅರಳಬೇಕು ಎಂದು ಹೇಳುವ ಯಾವುದೇ ‘ಗೇಟ್ ಕೀಪಿಂಗ್’ ಇರಬಾರದು.
ನಾಟಕದ ಜೀವ ಇರುವುದು ಹುಡುಕಾಟದಲ್ಲಿ: ಮಹಿಳಾ ಪಾತ್ರಗಳು ತೋರುವ ಪ್ರತಿರೋಧದಲ್ಲಿ ಅಡಗಿರುವ ವ್ಯಂಗ್ಯ, ಅಸಹಾಯಕತೆಯನ್ನು ಹಿಡಿದಿರುವ ನಿರ್ದೇಶಕರ ಸೂಕ್ಷತೆಯಲ್ಲಿ. ನಾಟಕ ಮುಗಿಸಿದ ಮೇಲೆ ನಾವು ನಾಟಕದೊಳಗೆ ಕಥೆ ಹೇಳಲು ಬಹುಮಾಧ್ಯಮಗಳನ್ನು ಯಾಕಾಗಿ ಬಳಸುತ್ತೇವೆ ಎಂಬ ಪ್ರಶ್ನೆಯೊಂದು ಸುಳಿಯಿತು. ಅದಕ್ಕೆ ಹೊಳೆದ ಉತ್ತರ: ಇಂದಿಗೆ ಸಂಕೀರ್ಣವಾಗುತ್ತಿರುವ, ನಾನಾ ರೂಪಗಳ ತಾಳುತ್ತಿರುವ ಒಮ್ಮೊಮ್ಮೆ ಮೇಲ್ನೋಟಕ್ಕೆ ಕಾಣದೆ ಹೋಗುವ ದಬ್ಬಾಳಿಕೆಗಳನ್ನು ಹಿಡಿಯಲು ಅದು ಇಂದಿನ ಅಗತ್ಯವೇನೋ ಎನ್ನುವ ಹಾಗೆ ಈ ನಾಟಕ ನಮ್ಮ ಮುಂದಿದೆ. ‘ಪ್ರಾಜೆಕ್ಟ್ ಡಾರ್ಲಿಂಗ್’ ನಾಟಕ ಆದರ ಆಹ್ವಾನ ಪತ್ರಿಕೆಯಲ್ಲಿಯೇ ಬರೆದುಕೊಂಡಂತೆ ಕನ್ನಡ ರಂಗಭೂಮಿಯ ಮಹಿಳಾ ಕಲಾವಿದರನ್ನು ನಮ್ಮ ಸಾಂಸ್ಕೃತಿಕ ಇತಿಹಾಸಕ್ಕೆ ನಮ್ಮ ನಿಯಮಗಳ ಮೇಲೆ ಪುನಃ ಪರಿಚಯಿಸುವ ಮಹತ್ವದ ರಂಗಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ.
- ದಾದಾಪೀರ್ ಜೈಮನ್, ನಾಟಕ ವಿಮರ್ಶಕರು