ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಣ್ಣಗುಡ್ಡ ಮತ್ತು ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಇದರ ಸಹಯೋಗದಲ್ಲಿ ‘ರಂಗತರಬೇತಿ ಕಾರ್ಯಾಗಾರ ಮತ್ತು ನಾಟಕ ನಿರ್ಮಾಣ ಪ್ರಕ್ರಿಯೆ’ಯು ದಿನಾಂಕ 11-02-2024ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ಉದ್ದಾಟನೆಗೊಂಡಿತು.
ಈ ಕಾರ್ಯಾಗಾರವನ್ನು ಕಾಲೇಜಿನ ಸಂಚಾಲಕರಾದ ಶ್ರೀ ವಸಂತ್ ಕಾರಂದೂರು ಉದ್ಘಾಟಿಸಿ “ಇದೊಂದು ಸರಳ ಮತ್ತು ಅಪೂರ್ವವಾದ ಸಮಾರಂಭ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಒಳ್ಳೆಯ ರೀತಿಯ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಇಂದು ನಾಟಕ ಕಲೆ ನಶಿಸಿ ಹೋಗುತ್ತಿದೆ. ಭೂಮಿಯಲ್ಲಿ ನಾವು ಬದುಕಿ ಇರುವಷ್ಟು ಕಾಲ ಈ ನಾಟಕವು ಶಾಶ್ವತವಾಗಿ ಬೆಳವಣಿಗೆಯನ್ನು ಹೊಂದಬೇಕು. ಇದು ನಮ್ಮ ಕಾಲೇಜಿನ ಹೊಸ ಹಾಗೂ ಒಳ್ಳೆಯ ಪ್ರಯತ್ನ. ಇದರಲ್ಲಿ ನಾವು ಯಶಸ್ವಿಯಾಗಿ ಸಮಾಜಕ್ಕೆ ಒಳ್ಳೆಯ ನಟರು ನಿರ್ದೇಶಕರನ್ನು ನೀಡುವ ಸುವರ್ಣ ಅವಕಾಶ ಬಂದಿದೆ” ಎಂದು ಹೇಳಿದರು.
ಜರ್ನಿ ಥಿಯೇಟರ್ ಇದರ ಸಾಂಸ್ಕೃತಿಕ ರಾಯಭಾರಿಯಾದ ಶ್ರೀ ಸುನೀಲ್ ಪಲ್ಲಮಜಲು ಇವರು “ಅನುಭವ ಸವಿಯಲ್ಲ ಅದರ ನೆನಪೇ ಸವಿ. ಅದು ಮತ್ತೆ ಮರುಕಳಿಸಿದೆ. ನಾಟಕ ಎಂದರೇನು ? ನಾಟಕವು ಅದರ ಆಚೆಗಿರುವ ಬದುಕನ್ನು ಕಟ್ಟಿಕೊಡುತ್ತದೆ. ಒಬ್ಬ ನಾಟಕಕಾರ ಮಾನ-ಅಪಮಾನ ಎಲ್ಲವನ್ನು ಸಹಿಸಿಕೊಂಡು ಬದುಕು ಕಟ್ಟಿಕೊಳ್ಳುವ ಜಾಣ್ಮೆಯನ್ನು ಹೊಂದಿರುತ್ತಾನೆ. ನಮ್ಮ ಬದುಕಿನ ಮುಂದಿನ ದಾರಿ ಏನು ? ಎಂಬುದನ್ನು ನಾಟಕ ಕಲಿಸಿಕೊಡುತ್ತದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ನಾಟಕದಿಂದ ಸಾಧ್ಯ. ವಿದ್ಯಾರ್ಥಿಗಳು ಬೆಳೆಯುವ ಹಂತದಲ್ಲಿಯೇ ಈ ತರಬೇತಿಯನ್ನು ಪಡೆದರೆ ಅಪ್ರತಿಮ ಸಾಧನೆ ಸಾಧ್ಯ” ಎಂದರು.
ರಂಗಭೂಮಿ ತರಬೇತಿದಾರರಾದ ವಿದ್ದು ಉಚ್ಚಿಲ್ “ವಿದ್ಯಾರ್ಥಿಗಳಿಗೆ ನಾಟಕದಲ್ಲಿ ನಟನೆ ಮಾಡಲು ಉತ್ತಮ ವೇದಿಕೆ” ಎಂದರು.
ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿನಿಯಾದ ಜಯಶ್ರೀಯವರು “ನಾಟಕದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಕಾಲೇಜಿಗೆ ಬರುವಾಗ ನಾವೆಲ್ಲರೂ ವಿದ್ಯಾರ್ಥಿಗಳೇ. ಭವಿಷ್ಯ ನಮ್ಮ ಕೈಯಲ್ಲಿದೆ ಸರಿಯಾದ ರೀತಿಯಲ್ಲಿ ಅದನ್ನು ರೂಪಿಸಿಕೊಳ್ಳಬೇಕು. ಮುಂದೆ ಗುರಿ ಇರಬೇಕು ಹಿಂದೆ ಗುರು ಇರುತ್ತಾನೆ. ಹುಟ್ಟು-ಸಾವಿನ ನಡುವೆ ನಮ್ಮ ಬದುಕಿದೆ” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಆಶಾಲತಾ ಸುವರ್ಣರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್, ಸಂಗೀತಾ, ಯತೀನ್, ವಸಂತ್, ವಿಠಲ್ ಇವರೆಲ್ಲ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ.ನ ಅಕ್ಷಿತಾರವರು ನಿರೂಪಿಸಿ, ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ನಿಶಾ ಯುವರಾಜ್ ವಂದಿಸಿದರು. ರಂಗಭೂಮಿ ಆಸಕ್ತ 25 ವಿದ್ಯಾರ್ಥಿಗಳು ಇದರಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಾಗಾರವನ್ನು ವಿದ್ದು ಉಚ್ಚಿಲ್ ಇವರ ನೇತೃತ್ವದಲ್ಲಿ ಜೀವನ್ ಸಿದ್ಧಿ ಮತ್ತು ಇತ್ತೀಚೆಗಷ್ಟೇ ತ್ರಿಪುರಾದ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಡಿಪ್ಲೊಮಾ ಪದವಿ ಪೂರ್ಣಗೊಳಿಸಿ ಬಂದಿರುವ ಮನೀಷ್ ಪಿಂಟೋರವರು ತರಗತಿಗಳನ್ನು ನಡೆಸುತ್ತಿದ್ದು, ಇದರ ಜೊತೆಗೆ ಕಾಲೇಜಿನ ಲಲಿತಕಲಾ ಸಂಘದ ಮುಖ್ಯಸ್ಥರಾದ ಡಾ. ನಿಶಾ ಯುವರಾಜ್ ಕಾರ್ಯಾಗಾರದ ಸಂಪೂರ್ಣ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಕಾರ್ಯಾಗಾರದಲ್ಲಿ ನಟನೆ, ಮೌಖಿಕ ಮತ್ತು ಆಂಗಿಕ ಅಭಿನಯ, ಚಲನೆ, ವ್ಯಾಯಮ, ಆಂಗಿಕ ಸಾಧನೆ ಮೊದಲಾದ ರಂಗಸಂಬಂಧೀ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ.