ಮಂಗಳೂರು : ಚಿತ್ರಕಲಾ ಶಿಕ್ಷಕ ದಿ. ಬಿ.ಜಿ. ಮಹಮ್ಮದ್ ಅವರ 103ನೇ ಜನ್ಮದಿನಾಚರಣೆ ಅಂಗವಾಗಿ ಬಿ.ಜಿ.ಎಂ. ಆರ್ಟ್ ಟ್ರಸ್ಟ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಮತ್ತು ‘ಬಿ.ಜಿ.ಎಂ. ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 14-01-2024ರಂದು ಮಂಗಳೂರಿನ ಮಿನಿ ಟೌನ್ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ಬಿ.ಜಿ.ಎಂ. ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿದ ಚಿತ್ರಕಲಾವಿದ ಗಣೇಶ ಸೋಮಯಾಜಿ ಬಿ. ಇವರು ಮಾತನಾಡುತ್ತಾ, “ವ್ಯಕ್ತಿತ್ವವನ್ನು ಸೃಜನಶೀಲವಾಗಿ ರೂಪಿಸಿಕೊಳ್ಳಲು ಚಿತ್ರಕಲೆಯ ಅಭ್ಯಾಸ ನೆರವಾಗುತ್ತದೆ. ಚಿತ್ರಕಲೆಯನ್ನು ಅಭ್ಯಾಸ ಮಾಡಿದರೆ, ಯಾವುದೇ ಹುದ್ದೆಯನ್ನು ನಿಭಾಯಿಸುವಾಗಲೂ ಒಂದಿಲ್ಲ ಒಂದು ರೀತಿಯಲ್ಲಿ ಅದು ನೆರವಿಗೆ ಬರುತ್ತದೆ. ವಿದ್ಯೆ ಕಲಿಯುವಾಗ ವ್ಯಾಕರಣಗಳ ಜೊತೆ ಗುರುಗಳ ಪ್ರೀತಿ ಅಭಿಮಾನ ಹೃತ್ಪೂರ್ವಕವಾಗಿ ಸಿಕ್ಕಿದರೆ ಖಂಡಿತಾ ನಾವು ಯಶಸ್ವಿಯಾಗುತ್ತೇವೆ. ಜಲವರ್ಣ ಕಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದಿದ್ದರೆ ಬಿಜಿಎಂ ಅವರೇ ಕಾರಣ. ಬಿ.ಜಿ.ಮಹಮ್ಮದ್ ಶಿಷ್ಯಂದಿರು ಸೇರಿಕೊಂಡು 1974ರಲ್ಲಿ ಸ್ಪೂಡೆಂಟ್ಸ್ ಅಸೋಸಿಯೇಷನ್ ಆರಂಭಿಸಿದ್ದೆವು. ಕಲಾವಿದ ಯಶಸ್ಸಿನ ಮೆಟ್ಟಿಲೇರುತ್ತಾ ಸಾಗಿದಂತೆ ಒಬ್ಬಂಟಿ ಆಗುತ್ತಾ ಹೋಗುತ್ತಾನೆ. ಆತನಿಂದ ಮನೆಯವರು ಗೆಳೆಯರೂ ದೂರವಾಗುತ್ತಾರೆ. ಆದರೆ ಈ ಸಂಸ್ಥೆ 50 ವರ್ಷಗಳಿಂದಲೂ ಅದೇ ವಿಶ್ವಾಸ ಗೌರವ ಉಳಿಸಿಕೊಂಡು ಮುನ್ನಡೆಯುತ್ತಿದೆ” ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, “ಬಿ.ಜಿ.ಎಂ. ಕಲಾಶಾಲೆಯು, ಶಾಲೆಯಂತಿರಲಿಲ್ಲ, ಅದೊಂದು ಕುಟುಂಬವಾಗಿತ್ತು. ಮಹಮ್ಮದ್ ಅವರು ಜಾತಿ ಮತ ಭೇದವಿಲ್ಲದೇ ಬಹಳ ಪ್ರೀತಿಯಿಂದ ಚಿತ್ರಕಲೆಯನ್ನು ಕಲಿಸುತ್ತಿದ್ದರು ಎಂದು ಅನೇಕ ವಿದ್ಯಾರ್ಥಿಗಳು ಹೇಳುತ್ತಾರೆ. ಅವರ ಪ್ರೀತಿ ವಿಶ್ವಾಸವನ್ನು ನೆನಪಿಸಿಕೊಳ್ಳುವ ಹಾಗೂ ಅವರ ಧ್ಯೇಯವನ್ನು ಪಾಲಿಸುವ ಕೆಲಸ ಸದಾ ಹೀಗೆಯೇ ಮುಂದುವರಿಯಲಿ” ಎಂದರು.
ಐ.ಬಿ.ಎಂ. ಮೆಷಿನ್ಸ್ ಕಂಪನಿಯ ನಿವೃತ್ತ ಹಣಕಾಸು ಪ್ರಬಂಧಕ ಜೋಸೆಫ್ ರಾಡ್ರಿಗಸ್, ಆರ್ಟಿಸ್ಟ್ ಕಂಬೈನ್ ಅಧ್ಯಕ್ಷ ಟ್ರೆವರ್ ಪಿಂಟೊ, ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ, ಬಿ.ಜಿ. ಮಹಮ್ಮದ್ ಅವರ ಪುತ್ರರಾದ ಶಬ್ಬೀರ್ ಅಲಿ ಮತ್ತು ಶಮೀರ್ ಅಲಿ, ರಾಜೇಶ್ ಕುಮಾರ್ ಎನ್. ಭಾಗವಹಿಸಿದ್ದರು. ಟ್ರಸ್ಟಿನ ಅಧ್ಯಕ್ಷೆ ನವೀನಾ ಎನ್. ರೈ ಸ್ವಾಗತಿಸಿದರು. ಅನಂತಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.
ಮೂರು ವಿಭಾಗಗಳಲ್ಲಿ ನಡೆದ ಈ ಚಿತ್ರಕಲಾ ಸ್ಪರ್ಧೆಯಲ್ಲಿ 600ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶರತ್ ಹೊಳ್ಳ, ಶ್ರೀಲತಾ, ರೂಬಿ ರತನ್, ರೂಪಾ ವಸುಂಧರಾ ಆಚಾರ್ಯ, ಸುಷ್ಮಾ, ಅಶ್ಮಿತಾ ರೈ ತೀರ್ಪುಗಾರರಾಗಿ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಶಬ್ಬೀರ್ ಅಲಿ, ರಾಜೇಶ್ ಕುಮಾರ್ ಎನ್., ಟ್ರೆವರ್ ಪಿಂಟೊ, ಸುಧೀರ್ ಶೆಟ್ಟಿ ಕಣ್ಣೂರು, ನವೀನಾ ಎನ್. ರೈ, ಜೋಸೆಫ್ ರಾಡ್ರಿಗಸ್, ಶಮೀರ್ ಅಲಿ, ಹೀನಾ ಹಾಗೂ ರೆಹನಾ ಅವರ ಸಮ್ಮುಖದಲ್ಲಿ ಚಿತ್ರ ಕಲಾವಿದ ಬಿ. ಗಣೇಶ್ ಸೋಮಯಾಜಿ ಅವರಿಗೆ ‘ಬಿ.ಜಿ.ಎಂ. ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸ್ಪರ್ಧಾ ವಿಜೇತರು : ನಾಲ್ಕನೇ ತರಗತಿವರೆಗಿನ ವಿಭಾಗದಲ್ಲಿ ಮೊದಲ ಸ್ಥಾನ : ನಿಹಾರ್ ಜೆ.ಎಸ್., ಎರಡನೇ ಸ್ಥಾನ : ನಿಧೀಶ್ (ಇಬ್ಬರೂ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್), ಮೂರನೇ ಸ್ಥಾನ : ಪಾವನಿ ಜಿ. ರಾವ್ (ಅನಂತೇಶ್ವರ ಹಿ.ಪ್ರಾ. ಶಾಲೆ).
5ರಿಂದ 7ನೇ ತರಗತಿವರೆಗಿನ ವಿಭಾಗದಲ್ಲಿ ಮೊದಲ ಸ್ಥಾನ : ಹಂಸಿಕಾ (ಉರ್ವದ ಕೆನರಾ ಶಾಲೆ), ಎರಡನೇ ಸ್ಥಾನ : ಅನ್ವಿತ್ ಆರ್. ಶೆಟ್ಟಿಗಾರ್ (ಉಡುಪಿಯ ಸೇಂಟ್ ಮೇರಿ ಇಂಗ್ಲಿಷ್ ಮಾಧ್ಯಮ ಶಾಲೆ), ಮೂರನೇ ಸ್ಥಾನ : ಅವನಿ ಎ. ಆರಿಗ (ಬೆಳ್ಮಣ್ಣಿನ ಶ್ರೀಲಕ್ಷ್ಮೀಜನಾರ್ಧನ ಇಂಟರ್‌ನ್ಯಾಷನಲ್ ಶಾಲೆ).
ಪ್ರೌಢಶಾಲೆ ವಿಭಾಗದಲ್ಲಿ ಮೊದಲ ಸ್ಥಾನ : ಅಕ್ಷಜ್ (ಸುರತ್ಕಲ್‌ನ ಎನ್‌ಐಟಿಕೆ ಇಂಗ್ಲಿಷ್ ಮಾಧ್ಯಮ ಶಾಲೆ), ಎರಡನೇ ಸ್ಥಾನ ಅನ್ವಿತ್ ಹರೀಶ್ (ಉರ್ವ ಕೆನರಾ ಪ್ರೌಢಶಾಲೆ), ಮೂರನೇ ಸ್ಥಾನ : ಮೆಹಕ್ ಫಾತಿಮಾ (ವಿದ್ಯಾರತ್ನ ಇಂಗ್ಲಿಷ್ ಮಾಧ್ಯಮ ಶಾಲೆ).